ಶಿವಭಾವದಿಂದ ಆತ್ಮ ಹುಟ್ಟಿ, ಶಿವ ತಾನೆಂಬ
ಉಭಯವನಲಂಕರಿಸಿದನಾಗಿ ಆತ್ಮಂಗೆ ಭಾವನೆಂಬ ಹೆಸರಾಯಿತ್ತು.
ಆತ್ಮ ಬಂದು ಆಕಾಶವ ಕೂಡಿದಲ್ಲಿ ಜ್ಞಾನವೆಂಬ ಹೆಸರಾಯಿತ್ತು.
ಆತ್ಮ ಬಂದು ವಾಯುವ ಕೂಡ [ಮನವೆಂಬ ಹೆಸರಾಯಿತ್ತು]
ಆತ್ಮ ಬಂದು ವಾಯುವ ಕೂಡಿದಲ್ಲಿ ಅಹಂಕಾರವೆಂಬ ಹೆಸರಾಯಿತ್ತು.
ಆತ್ಮ ಬಂದು ಅಪ್ಪುವ ಕೂಡಿದಲ್ಲಿ ಬುದ್ಧಿಯೆಂಬ ಹೆಸರಾಯಿತ್ತು.
ಆತ್ಮ ಬಂದು ಪೃಥ್ವಿಯ ಕೂಡಿದಲ್ಲಿ ಚಿತ್ತೆಂಬ ಹೆಸರಾಯಿತ್ತು.
ಚಿತ್ತು ಆಚಾರಲಿಂಗವ ಧರಿಸಿಪ್ಪುದು. ಬುದ್ಧಿ ಗುರುಲಿಂಗವ ಧರಿಸಿಪ್ಪುದು.
ಅಹಂಕಾರ ಶಿವಲಿಂಗವ ಧರಿಸಿಪ್ಪುದು
ಮನಸ್ಸು ಜಂಗಮಲಿಂಗವ ಧರಿಸಿಪ್ಪುದು.
ಜ್ಞಾನ ಪ್ರಸಾದಲಿಂಗವ ಧರಿಸಿಪ್ಪುದು.
ಭಾವ ಮಹಾಲಿಂಗವ ಧರಿಸಿಪ್ಪುದು.
ಸೌರಾಷ್ಟ್ರ ಸೋಮೇಶ್ವರಲಿಂಗ ತಾನು ತಾನಾಗಿರಬೇಕು.