ಪುಣ್ಯಪಾಪವೆಂಬೆರಡನು ಕಣ್ಣಿಲಿ ಕಾಣರು,
ಕಿವಿಯಲಿ ಕೇಳರು.
ಪಣ್ಣ ಮೆದ್ದು ಬೀಜವನುಗುಳುವಂತೆ
ಪುಣ್ಯವನೆತ್ತಬಲ್ಲರಯ್ಯ?
ಕಣ್ಣೊಳು ಪಾಪ, ಕರ್ಣದೊಳು ಪುಣ್ಯ
ಬಣ್ಣಿಸುವರಾರಳವಲ್ಲ.
ಬಯಲನೆ ಬಯಲು ನುಂಗಿತ್ತು.
ನಿರ್ವಯಲು ಈ ದೇಹ ಮಣ್ಣಿನ ಮಾಟಕೂಟದೊಳು
ಬಣ್ಣವನಂತ ಸಿಕ್ಕಿಯವೆ ಕಾಣಾ
ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ.