ಆರು ದರುಶನ ಹದಿನೆಂಟು ಸಮಯ
ನೂರೊಂದು ಕುಲಕೆ ಬೇರೆವೊಬ್ಬ ದೈವವೆ?
ಹೋರಾಡುವರು ಭವಿ ಭಕ್ತರೆಂದು.
ಊರು ಮೊಗೆವ ನೀರು ಬಾವಿಯೆಂಜಲು,
ತೊರೆ ಅಗ್ನಿಗೆ ಕ್ರಿಯೆ ಉಂಟೆ? ತಾ ಭವಿ.
ಸೂರ್ಯಚಂದ್ರರು ಭವಿಯ ಕಿರಣದೊಳಗಿದ್ದು
ಭಕ್ತನೆಂತು ದೂರವಿಲ್ಲ.
ಅಷ್ಟದಿಕ್ಪಾಲಕರು ಪಿಂಡಾಂಡ ಬ್ರಹ್ಮಾಂಡಕೆ
ಯಾರಾದರು ತರ್ಕಿಸುವರು.
ಭವಿ ಮೊದಲೊ? ಭಕ್ತ ಮೊದಲೊ?
ತೀರದ ಮಾತನಾಡುವ ತಿರುಬೋಡಿಗೆ ಭಕ್ತಿ ಇಲ್ಲ ಕಾಣಾ
ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ.