ತನ್ನ ತಾನರಿವುದೆ ಉತ್ತಮ ಶರೀರ.
ಇನ್ನು ಹೇಳಿದರೆ ಕೇಳುವದೇ ಮಧ್ಯಮ ಶರೀರ.
ಮನ್ನಿಸದೆ ಅಗ್ನಿಗೆ ಬೀಳುವುದೆ ಕನಿಷ್ಠ ಶರೀರ.
ಹೊನ್ನಿನ ಬಣ್ಣಕೆ ಇವು ಮೂರು ಬಣ್ಣ ಹೆಚ್ಚು.
ಅನ್ನವ ದಂಡಿಸಿಕೊಂಬುದೆ ಅಧಮ ಜಾತಿ,
ಮನ್ನಣೆಯಿಂದ ನೀಡಿದ್ದ ಕೊಂಬುದೆ ಮಧ್ಯಮ ಜಾತಿ,
ಇನ್ನು ಯಾರನು ಬೇಡದೆ ಕೃಷಿಯ ಮಾಡಿ ಉಂಬುದೆ ಅಪೂರ್ವಜಾತಿ.
ಹನ್ನೊಂದು ಪರಿ ಉದ್ಯೋಗ ಉಂಟು.
ಕರ್ಮಧರ್ಮವ ಸೋದಿಸಬಲ್ಲರೆ ಅನ್ಯಾಯಹತ್ತರ
ಮೇಲು ಧರ್ಮಕಾಯಕ ಕಾಣಾ
ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ.