Index   ವಚನ - 16    Search  
 
ಘ್ರಾಣೇಂದ್ರಿಯವಿಷಯದಿಂದೆ ಭ್ರಮರ ಕೆಡುವುದು ಸಂಪಿಗೆಯ ಪುಷ್ಪದಲ್ಲಿ. ರಸನೇಂದ್ರಿಯವಿಷಯದಿಂದೆ ಮತ್ಸ್ಯಕೆಡುವುದು ಜಾಲಗಾರನ ಬಲೆಯಲ್ಲಿ. ನಯನೇಂದ್ರಿಯವಿಷಯದಿಂದೆ ಪತಂಗ ಕೆಡುವುದು ದೀಪದ ಜ್ವಾಲೆಯಲ್ಲಿ. ತ್ವಗಿಂದ್ರಿಯವಿಷಯದಿಂದ ಗಜ ಕೆಡುವುದು, ರಾಜನ ಕೃತಕದಲ್ಲಿ. ಶ್ರವಣೇಂದ್ರಿಯವಿಷಯದಿಂದೆ ಎರಳೆ ಕೆಡುವುದು ಬೇಟೆಗಾರನ ಸರಳಿನಲ್ಲಿ. ಇಂತೀ ಪ್ರಾಣಿಗಳು ಒಂದೊಂದು ವಿಷಯದಿಂದೆ ಬಂಧನಕ್ಕೊಳಗಾದವು. ಇಂತಪ್ಪ ಪಂಚೇಂದ್ರಿಯವಿಷಯವ್ಯಾಪಾರದಲ್ಲಿ ಲಂಪಟರಾದ ಮನುಜರು ಕೆಟ್ಟ ಕೇಡನೇನೆಂಬೆನಯ್ಯ ಅಖಂಡೇಶ್ವರಾ?