Index   ವಚನ - 167    Search  
 
ಎನ್ನ ಕಂಗಳ ಮುಂದಣ ಕಾಮವ ಕಳೆದು ನಿಮ್ಮ ಮಂಗಳಸ್ವರೂಪವ ತೋರಿಸಯ್ಯ ದೇವಾ. ಎನ್ನ ಮನದ ಮುಂದಣ ಆಸೆಯ ಬಿಡಿಸಿ ನಿಮ್ಮ ಮಂತ್ರದ ನೆನಹ ನೆಲೆಗೊಳಿಸಯ್ಯ ದೇವಾ. ಎನ್ನ ಪ್ರಾಣದ ಮುಂದಣ ಪ್ರಪಂಚವ ಕೆಡಿಸಿ ನಿಮ್ಮ ಪ್ರಸಾದವ ನೆಲೆಗೊಳಿಸಯ್ಯ ದೇವಾ. ಎನ್ನ ತನುವ ಮುಸುಕಿದ ತಾಮಸವ ಕಳೆದು ನಿಮ್ಮ ಭಕ್ತಿಯ ಅನುವ ತೋರಿಸಿ ಬದುಕಿಸಯ್ಯ ದೇವಾ ಅಖಂಡೇಶ್ವರಾ.