Index   ವಚನ - 236    Search  
 
ಅಂದೊಬ್ಬ ದೇವ, ಇಂದೊಬ್ಬ ದೇವನೆಂದು ಸಂದೇಹಗೊಳಬೇಡ ಎಲೆ ಮನವೆ. ಅಂದು ಕೈಲಾಸದಲ್ಲಿ ಮನುಮುನಿ ದೇವದಾನವರಿಂದ ಓಲಗವ ಕೊಂಬ ದೇವ ಇಂದು ಎನ್ನ ಕರಸ್ಥಲದಲ್ಲಿದ್ದಾನೆ; ಇಲ್ಲಿಯೇ ನೋಡು ಎಲೆ ಮನವೆ. ಅಂದು ಚೋಳಾದಿಗೊಲಿದ ದೇವ ಇಂದು ಎನ್ನ ಕರಸ್ಥಲದಲ್ಲಿದ್ದಾನೆ; ಇಲ್ಲಿಯೇ ನೋಡು ಎಲೆ ಮನವೆ. ಅಂದು ಅರವತ್ತುಮೂರು ಪುರಾತನರಿಗೊಲಿದು ಶಾಂಭವಪುರಕ್ಕೊಯ್ದ ದೇವ ಇಂದು ಎನ್ನ ಕರಸ್ಥಲದಲ್ಲಿದ್ದಾನೆ; ಇಲ್ಲಿಯೇ ನೋಡು ಎಲೆ ಮನವೆ. ಅಂದು ಬಸವಣ್ಣ ಮೊದಲಾದ ಅಸಂಖ್ಯಾತ ಪ್ರಮಥಗಣಂಗಳ ತನ್ನೊಳಗೆ ಗರ್ಭೀಕರಿಸಿಕೊಂಡ ದೇವ ಇಂದು ಎನ್ನ ಕರಸ್ಥಲದಲ್ಲಿದ್ದಾನೆ; ಇಲ್ಲಿ ನೋಡು ಎಲೆ ಮನವೆ. ಎನ್ನ ಕರಸ್ಥಲದಲ್ಲಿ ಮೂರ್ತಿಗೊಂಡು ಬೆಳಗುವ ಪರಶಿವನ ನಂಬಿ ನಿಶ್ಚಯಿಸಿಕೊಂಡೆಯಾದಡೆ ನಮ್ಮ ಅಖಂಡೇಶ್ವರಲಿಂಗದಲ್ಲಿ ನಿನ್ನಿಂದ ಬಿಟ್ಟು ಸುಖಿಗಳಾರಿಲ್ಲ ನೋಡಾ ಎಲೆ ಮನವೆ.