Index   ವಚನ - 267    Search  
 
ಪೃಥ್ವಿ ದೇವರೆಂಬೆನೆ ಪೃಥ್ವಿ ದೇವರಲ್ಲ. ಅಪ್ಪು ದೇವರೆಂಬೆನೆ ಅಪ್ಪು ದೇವರಲ್ಲ. ಅಗ್ನಿ ದೇವರೆಂಬೆನೆ ಅಗ್ನಿ ದೇವರಲ್ಲ. ವಾಯು ದೇವರೆಂಬೆನೆ ವಾಯು ದೇವರಲ್ಲ. ಆಕಾಶ ದೇವರೆಂಬೆನೆ ಆಕಾಶ ದೇವರಲ್ಲ. ಆತ್ಮ ದೇವರೆಂಬೆನೆ ಆತ್ಮ ದೇವರಲ್ಲ. ಸೂರ್ಯ ದೇವರೆಂಬೆನೆ ಸೂರ್ಯ ದೇವರಲ್ಲ. ಚಂದ್ರ ದೇವರೆಂಬೆನೆ ಚಂದ್ರ ದೇವರಲ್ಲ. ಅದೇನು ಕಾರಣವೆಂದೊಡೆ: ಪೃಥ್ವಿ ಶಿವನ ಸದ್ಯೋಜಾತಮುಖದಲ್ಲಿ ಪುಟ್ಟಿತ್ತು. ಅಪ್ಪು ಶಿವನ ವಾಮದೇವಮುಖದಲ್ಲಿ ಪುಟ್ಟಿತ್ತು. ತೇಜ ಶಿವನ ಅಘೋರಮುಖದಲ್ಲಿ ಪುಟ್ಟಿತ್ತು. ವಾಯು ಶಿವನ ತತ್ಪುರುಷಮುಖದಲ್ಲಿ ಪುಟ್ಟಿತ್ತು. ಆಕಾಶ ಶಿವನ ಈಶಾನ್ಯಮುಖದಲ್ಲಿ ಪುಟ್ಟಿತ್ತು. ಆತ್ಮ ಶಿವನ ಗೋಪ್ಯಮುಖದಲ್ಲಿ ಪುಟ್ಟಿತ್ತು. ಸೂರ್ಯ ಶಿವನ ನಯನದಲ್ಲಿ ಪುಟ್ಟಿತ್ತು. ಚಂದ್ರ ಶಿವನ ಮನಸ್ಸಿನಲ್ಲಿ ಪುಟ್ಟಿತ್ತು. ``ಯತ್ ದೃಷ್ಟಮ್ ತತ್ ನಷ್ಟಮ್'' ಎಂದು, ಇಂತೀ ಅಷ್ಟತನುಗಳಿಗೆ ಹುಟ್ಟು ಹೊಂದು ಉಂಟಾದ ಕಾರಣ ಇವು ಕಲ್ಪಿತವೆಂದು ಕಳೆದು ನೀನೊಬ್ಬನೆ ನಿತ್ಯ ಪರಿಪೂರ್ಣನೆಂದು ತಿಳಿದು ಉಳಿದೆನಯ್ಯ ಅಖಂಡೇಶ್ವರಾ.