Index   ವಚನ - 266    Search  
 
ಅಷ್ಟಮೂರ್ತಿಗಳು ದೇವರೆಂಬ ಭ್ರಷ್ಟಭವಿಗಳ ಮಾತ ಕೇಳಲಾಗದು. ಅದೇನು ಕಾರಣವೆಂದೊಡೆ: ಪೃಥ್ವಿದೇವರಾದಡೆ, ಅಪ್ಪುವಿನ ಪ್ರಳಯದಲ್ಲಿ ಕರಗುವುದೆ? ಅಪ್ಪು ದೇವರಾದಡೆ, ಅಗ್ನಿಯ ಪ್ರಳಯದಲ್ಲಿ ಅರತು ಹೋಗುವುದೆ? ಅಗ್ನಿ ದೇವರಾದಡೆ, ವಾಯುವಿನ ಪ್ರಳಯದಲ್ಲಿ ಆರಿ ಹೋಗುವುದೆ? ವಾಯು ದೇವರಾದಡೆ, ಆಕಾಶದ ಪ್ರಳಯದಲ್ಲಿ ಲಯವಪ್ಪುದೆ? ಆಕಾಶ ದೇವರಾದಡೆ ಆತ್ಮನಲ್ಲಿ ಅಡಗಿಹೋಗುವುದೆ? ಆತ್ಮದೇವರಾದಡೆ, ದ್ವಂದ್ವಕರ್ಮಂಗಳನುಂಡು ಜನನಮರಣಂಗಳಲ್ಲಿ ಬಂಧನವಡೆವನೆ? ಚಂದ್ರಸೂರ್ಯರು ದೇವರಾದಡೆ ಭವಬಂಧನದಲ್ಲಿ ಸಿಲ್ಕಿ ತೊಳಲಿ ಬಳಲುವರೆ? ಇದು ಕಾರಣ ಇಂತೀ ಅಷ್ಟತನುಗಳು ಎಂತು ದೇವರೆಂಬೆನು? ದೇವರದೇವ ಮಹಾದೇವ ಮಹಾಮಹಿಮ ಎನ್ನೊಡೆಯ ಅಖಂಡೇಶ್ವರ ಒಬ್ಬನೆ ದೇವನಲ್ಲದೆ ಉಳಿದವರೆಲ್ಲ ಹುಸಿ ಹುಸಿ ಎಂಬೆನು ನೋಡಾ!