Index   ವಚನ - 422    Search  
 
ಎನ್ನ ಘ್ರಾಣದ ಕೊನೆಯಲ್ಲಿ ಕುಳ್ಳಿರ್ದು ಷಡ್ವಿಧಗಂಧವೆಂಬ ಭಕ್ತಿಪದಾರ್ಥವ ಕೈಕೊಂಡು ಎನಗೆ ಮುಕ್ತಿಪ್ರಸಾದವ ಕರುಣಿಸುವಾತನು ನೀನೆ ಅಯ್ಯಾ. ಎನ್ನ ಜಿಹ್ವೆಯ ಕೊನೆಯಲ್ಲಿ ಕುಳ್ಳಿರ್ದು ಷಡ್ವಿಧರಸವೆಂಬ ಭಕ್ತಿಪದಾರ್ಥವ ಕೈಕೊಂಡು ಎನಗೆ ಮುಕ್ತಿಪ್ರಸಾದವ ಕರುಣಿಸುವಾತನು ನೀನೆ ಅಯ್ಯಾ. ಎನ್ನ ನೇತ್ರದ ಕೊನೆಯಲ್ಲಿ ಕುಳ್ಳಿರ್ದು ಷಡ್ವಿಧರೂಪವೆಂಬ ಭಕ್ತಿಪದಾರ್ಥವ ಕೈಕೊಂಡು ಎನಗೆ ಮುಕ್ತಿಪ್ರಸಾದವ ಕರುಣಿಸುವಾತನು ನೀನೆ ಅಯ್ಯಾ. ಎನ್ನ ತ್ವಕ್ಕಿನ ಕೊನೆಯಲ್ಲಿ ಕುಳ್ಳಿರ್ದು ಷಡ್ವಿಧಸ್ಪರ್ಶನವೆಂಬ ಭಕ್ತಿಪದಾರ್ಥವ ಕೈಕೊಂಡು ಎನಗೆ ಮುಕ್ತಿಪ್ರಸಾದವ ಕರುಣಿಸುವಾತನು ನೀನೇ ಅಯ್ಯಾ. ಎನ್ನ ಶ್ರೋತ್ರದ ಕೊನೆಯಲ್ಲಿ ಕುಳ್ಳಿರ್ದು ಷಡ್ವಿಧಶಬ್ದವೆಂಬ ಭಕ್ತಿಪದಾರ್ಥವ ಕೈಕೊಂಡು ಎನಗೆ ಮುಕ್ತಿಪ್ರಸಾದವ ಕುರಣಿಸುವಾತನು ನೀನೆ ಅಯ್ಯಾ. ಎನ್ನ ಹೃದಯದ ಕೊನೆಯಲ್ಲಿ ಕುಳ್ಳಿರ್ದು ಷಡ್ವಿಧ ತೃಪ್ತಿಯೆಂಬ ಭಕ್ತಿಪದಾರ್ಥವ ಕೈಕೊಂಡು, ಎನಗೆ ಮುಕ್ತಿಪ್ರಸಾದವ ಕರುಣಿಸುವಾತನು ನೀನೆ ಅಯ್ಯಾ ಅಖಂಡೇಶ್ವರಾ.