ನಿಮ್ಮ ಸ್ವಲೀಲೆಯಿಂದೆ
ಹಲವು ನಾಮರೂಪುಕ್ರಿಯೆಯಿಂದೆ ಸಾಕಾರವೆನಿಸಿ
ನೀವು ಆಚಾರಲಿಂಗವಾದಲ್ಲಿ,
ನಾನು ಭಕ್ತನೆಂಬಂಗವಾಗಿ
ನಿಮ್ಮೊಳಗೇಕವಾಗಿರ್ದೆನಯ್ಯಾ.
ನೀವು ಗುರುಲಿಂಗವಾದಲ್ಲಿ,
ನಾನು ಮಹೇಶ್ವರನೆಂಬಂಗವಾಗಿ
ನಿಮ್ಮೊಳಗೇಕವಾಗಿರ್ದೆನಯ್ಯಾ.
ನೀವು ಶಿವಲಿಂಗವಾದಲ್ಲಿ,
ನಾನು ಪ್ರಸಾದಿಯೆಂಬಂಗವಾಗಿ
ನಿಮ್ಮೊಳಗೇಕವಾಗಿರ್ದೆನಯ್ಯಾ.
ನೀವು ಜಂಗಮಲಿಂಗವಾದಲ್ಲಿ,
ನಾನು ಪ್ರಾಣಲಿಂಗಿಯೆಂಬಂಗವಾಗಿ
ನಿಮ್ಮೊಳಗೇಕವಾಗಿರ್ದೆನಯ್ಯಾ.
ನೀವು ಪ್ರಸಾದಲಿಂಗವಾದಲ್ಲಿ,
ನಾನು ಶರಣನೆಂಬಂಗವಾಗಿ
ನಿಮ್ಮೊಳಗೇಕವಾಗಿರ್ದೆನಯ್ಯಾ.
ನೀವು ಮಹಾಲಿಂಗವಾದಲ್ಲಿ,
ನಾನು ಐಕ್ಯನೆಂಬಂಗವಾಗಿ
ನಿಮ್ಮೊಳಗೇಕವಾಗಿರ್ದೆನಯ್ಯಾ.
ನೀವು ನಿಷ್ಕಲಲಿಂಗವಾದಲ್ಲಿ,
ನಾನು ಮೂಲಜ್ಞಾನಚಿತ್ತೆಂಬಂಗವಾಗಿ
ನಿಮ್ಮೊಳಗೇಕವಾಗಿರ್ದೆನಯ್ಯಾ.
ನೀವು ಶೂನ್ಯಲಿಂಗವಾದಲ್ಲಿ,
ನಾನು ಮಹಾಜ್ಞಾನಶಕ್ತಿಯೆಂಬಂಗವಾಗಿ
ನಿಮ್ಮೊಳಗೇಕವಾಗಿರ್ದೆನಯ್ಯಾ.
ನೀವು ನಿರಂಜನಲಿಂಗವಾದಲ್ಲಿ,
ನಾನು ಅಖಂಡ ಪರಿಪೂರ್ಣಮಹಾಕಳೆಯೆಂಬಂಗವಾಗಿ
ನಿಮ್ಮೊಳಗೇಕವಾಗಿರ್ದೆನಯ್ಯಾ.
ನೀವು ಆವಾವ ರೂಪುಧರಿಸಿದಲ್ಲಿ
ನಾನು ಆಯಾಯ ರೂಪಿಂಗೆ ತಕ್ಕಂಗವಾಗಿ
ನಿಮ್ಮೊಳಗೇಕವಾಗಿರ್ದೆನಯ್ಯಾ ಅಖಂಡೇಶ್ವರಾ.