Index   ವಚನ - 622    Search  
 
ಅಂತರಂಗದಲ್ಲಿ ಅರುಹಿನ ಶುದ್ಧಿಯನರಿಯದೆ, ಬಹಿರಂಗದಲ್ಲಿ ಕಂಥೆ ಕರ್ಪರ ದಂಡ ಕಮಂಡಲು ಭಸ್ಮದಗುಂಡಿಗೆ ಎಂಬ ಪಂಚಮುದ್ರೆಗಳ ಧರಿಸಿ, ಧರೆಯ ಮಂಡಲದೊಳಗೆ ಚರಿಸುವ ಅಣ್ಣಗಳ ಕಂಡು ಬೆರಗಾದೆನಯ್ಯಾ. ಅದೇನು ಕಾರಣವೆಂದೊಡೆ: ಪುರಜನರ ಮೆಚ್ಚಿಸುವೆನೆಂದು ಜಾತಿಕಾರನು ಓತು ವೇಷವ ಧರಿಸಿ ಒಡಲ ಹೊರೆವಂತೆ, ಕೊಡುಕೊಂಬುವ ಭಕ್ತನ ಮೆಚ್ಚಿಸುವೆನೆಂದು ಮೃಡನ ವೇಷವ ಧರಿಸಿ, ಒಡಲ ಕಕ್ಕುಲತೆಗೆ ತಿರುಗುವ ಕಡುಪಾತಕ ಜಡಜೀವಿಗಳ ಮುಖವ ನೋಡಲಾಗದಯ್ಯಾ ಅಖಂಡೇಶ್ವರಾ.