Index   ವಚನ - 623    Search  
 
ಅನುಪಮಲಿಂಗದಲ್ಲಿ ಅಂಗ ಮನ ಪ್ರಾಣಂಗಳನಡಗಿಸಿ ಅವಿರಳ ಸಮರಸದಿಂದಿರ್ಪ ಮಹಾಶರಣನ ಅರುಹಿನ ಪಂಚಮುದ್ರೆಗಳು ಆವುವೆಂದಡೆ: ಸರ್ವಾಚಾರಸಂಪತ್ತೆಂಬ ಕಂಥೆ, ಅನಾದಿಯೆಂಬ ಕರ್ಪರ, ಅಖಂಡವೆಂಬ ದಂಡ, ಅಜಾಂಡವೆಂಬ ಕಮಂಡಲು, ಪರಿಪೂರ್ಣಮಹಾಜ್ಞಾನವೆಂಬ ಭಸ್ಮದಗುಂಡಿಗೆ, ಇಂತೀ ಅರುಹಿನ ಪಂಚಮುದ್ರೆಗಳ ಅಂತರಂಗದಲ್ಲಿ ಧರಿಸಿ ಹೊರಗೆ ಬಹಿರಂಗದ ಮೇಲೆ ಮುನ್ನಿನ ಮಾರ್ಗಕ್ರಿಯೆಯಂತೆ ಪಂಚಮುದ್ರೆಗಳ ಧರಿಸಿಕೊಂಡು, ಮಾಯಾವಿರಹಿತವೆಂಬ ಹಾವಿಗೆಯ ಮೆಟ್ಟಿಕೊಂಡು, ಅಂಗ ಮನ ಪ್ರಾಣಂಗಳಲ್ಲಿ ಕ್ಷಮೆ ದಮೆ ಶಾಂತಿ ಸೈರಣೆ ಕರುಣ ಹರ್ಷಾನಂದವ ತುಂಬಿಕೊಂಡು, ಲೋಕಪಾವನವ ಮಾಡುತ್ತ ಭಕ್ತಿಭಿಕ್ಷಾಂದೇಹಿಯಾಗಿ ಸುಳಿವ ಮಹಾಘನ ಪರಮಮಹಾಂತಿನ ಜಂಗಮದ ಶ್ರೀಪಾದಕ್ಕೆ ನಮೋ ನಮೋ ಎಂಬೆನಯ್ಯಾ ಅಖಂಡೇಶ್ವರಾ.