Index   ವಚನ - 649    Search  
 
ಎನ್ನ ತನುವಿನೊಳಗೆ ತನುರೂಪಾಗಿರ್ದಿರಯ್ಯಾ ನೀವು. ಎನ್ನ ಮನದೊಳಗೆ ಮನರೂಪಾಗಿರ್ದಿರಯ್ಯಾ ನೀವು. ಎನ್ನ ಪ್ರಾಣದೊಳಗೆ ಪ್ರಾಣರೂಪಾಗಿರ್ದಿರಯ್ಯಾ ನೀವು. ಎನ್ನ ಭಾವದೊಳಗೆ ಭಾವರೂಪಾಗಿರ್ದಿರಯ್ಯಾ ನೀವು. ಎನ್ನ ಇಂದ್ರಿಯಂಗಳೊಳಗೆ ಇಂದ್ರಿಯಂಗಳ ರೂಪಾಗಿರ್ದಿರಯ್ಯಾ ನೀವು. ಎನ್ನ ವಿಷಯಂಗಳೊಳಗೆ ವಿಷಯಂಗಳ ರೂಪಾಗಿರ್ದಿರಯ್ಯಾ ನೀವು. ಎನ್ನ ತನು ಮನ ಪ್ರಾಣ ಭಾವ ಇಂದ್ರಿಯಂಗಳೆಲ್ಲವು ನಿಮ್ಮವಾಗಿ ಇಂತು ಎನ್ನೊಳಗೆ ನೀವು ಈ ಪರಿಯಲ್ಲಿರ್ದಿರಾಗಿ ನಾ ನಿಮ್ಮೊಳಗೆ ಚಿನ್ನಬಣ್ಣದಂತೆ ರತ್ನದೀಪ್ತಿಯಂತೆ ಜ್ಯೋತಿಪ್ರಭೆಯಂತಿರ್ದೆನಯ್ಯಾ ಅಖಂಡೇಶ್ವರಾ.