Index   ವಚನ - 704    Search  
 
ಅಂಡಾಭರಣರು ಘನವೆಂಬೆನೆ? ಅಂಡಾಭರಣರು ಘನವಲ್ಲ. ರುಂಡಾಭರಣರು ಘನವೆಂಬೆನೆ? ರುಂಡಾಭರಣರು ಘನವಲ್ಲ. ಗಂಗಾಧರರು ಘನವೆಂಬೆನೆ? ಗಂಗಾಧರರು ಘನವಲ್ಲ. ಗೌರೀವಲ್ಲಭರು ಘನವೆಂಬೆನೆ? ಗೌರೀವಲ್ಲಭರು ಘನವಲ್ಲ. ಚಂದ್ರಶೇಖರರು ಘನವೆಂಬೆನೆ? ಚಂದ್ರಶೇಖರರು ಘನವಲ್ಲ. ನಂದಿವಾಹನರು ಘನವೆಂಬೆನೆ? ನಂದಿವಾಹನರು ಘನವಲ್ಲ. ತ್ರಿಯಂಬಕರು ಘನವೆಂಬೆನೆ? ತ್ರಿಯಂಬಕರು ಘನವಲ್ಲ. ತ್ರಿಪುರವೈರಿ ಘನವೆಂಬೆನೆ? ತ್ರಿಪುರವೈರಿ ಘನವಲ್ಲ. ಪಂಚಮುಖರು ಘನವೆಂಬೆನೆ? ಪಂಚಮುಖರು ಘನವಲ್ಲ. ಫಣಿಕುಂಡಲರು ಘನವೆಂಬೆನೆ? ಫಣಿಕುಂಡಲರು ಘನವಲ್ಲ. ಶೂಲಪಾಣಿಗಳು ಘನವೆಂಬೆನೆ? ಶೂಲಪಾಣಿಗಳು ಘನವಲ್ಲ. ನೀಲಲೋಹಿತರು ಘನವೆಂಬೆನೆ? ನೀಲಲೋಹಿತರು ಘನವಲ್ಲ. ಅದೇನು ಕಾರಣವೆಂದೊಡೆ, ಇಂತಿವರಾದಿಯಾಗಿ ಅನಂತಕೋಟಿ ರುದ್ರಗಣಂಗಳು ಶರಣನ ಸರ್ವಾಂಗದಲ್ಲಿ ಅಡಗಿಹರಾಗಿ ಅಖಂಡೇಶ್ವರಾ, ನಿಮ್ಮ ಶರಣ ಘನಕ್ಕೆ ಘನವೆಂಬೆನಯ್ಯಾ.