ಕರ್ತನಿದ್ದೆಡೆಗೆ ಭೃತ್ಯ ಬಂದಡೆ,
ಭೃತ್ಯಾಚಾರವ ಮಾಡಿಸಿಕೊಂಬ ಕರ್ತಂಗೆ ಕರ್ತೃತ್ವವಲ್ಲದೆ
ಭೃತ್ಯನಿದ್ದೆಡೆಗೆ ಕರ್ತನೆಯ್ತಂದು,
ಭೃತ್ಯಾಚಾರವ ಮಾಡಿಸಿಕೊಂಬ ಕರ್ತಂಗೆ ಕರ್ತೃತ್ವವೆಲ್ಲಿಯದು?
ಜಗದ ಕರ್ತನ ವೇಷವ ಧರಿಸಿ ಕರ್ತನಾದ ಬಳಿಕ,
ಭಕ್ತನಿದ್ದೆಡೆಗೆ ಭಕ್ತಿಯ ಬಂದು ಮಾಡೆಂದಡೆ,
ಎನ್ನ ಕರ್ತತನಕ್ಕೆ ಅದೇ ಹಾನಿ ನೋಡಾ.
ಲಿಂಗಾಣತಿಯಿಂದ ಬಂದ ಪದಾರ್ಥವ
ಲಿಂಗಾರ್ಪಿತವ ಮಾಡುವದಲ್ಲದೆ,
ಅಂಗದಿಚ್ಛೆಗೆ ಅಂಗವಿಸಿ ಬೇಡಿದೆನಾದಡೆ,
ಎನ್ನ ಲಿಂಗಾಭಿಮಾನತನಕ್ಕೆ ಅದೇ ಹಾನಿ ನೋಡಾ.
ದೇಹ ಮನ ಪ್ರಾಣ ನಿಮ್ಮದಾಗಿ,
ನಾ ಹೊರೆಯಬೇಕೆಂಬ ಭ್ರಾಂತೆನಗಿಲ್ಲ.
ಬಡಮನವ ಮಾಡಿ ಒಂದಡಿಯ ನಡೆದೆನಾದಡೆ,
ಮನದೊಡೆಯ ಸಕಳೇಶ್ವರದೇವಾ, ನಿಮ್ಮಾಣೆ.
Art
Manuscript
Music
Courtesy:
Transliteration
Kartaniddeḍege bhr̥tya bandaḍe,
bhr̥tyācārava māḍisikomba kartaṅge kartr̥tvavallade
bhr̥tyaniddeḍege kartaneytandu,
bhr̥tyācārava māḍisikomba kartaṅge kartr̥tvavelliyadu?
Jagada kartana vēṣava dharisi kartanāda baḷika,
bhaktaniddeḍege bhaktiya bandu māḍendaḍe,
enna kartatanakke adē hāni nōḍā.
Liṅgāṇatiyinda banda padārthava
liṅgārpitava māḍuvadallade,Aṅgadicchege aṅgavisi bēḍidenādaḍe,
enna liṅgābhimānatanakke adē hāni nōḍā.
Dēha mana prāṇa nim'madāgi,
nā horeyabēkemba bhrāntenagilla.
Baḍamanava māḍi ondaḍiya naḍedenādaḍe,
manadoḍeya sakaḷēśvaradēvā, nim'māṇe.