Index   ವಚನ - 29    Search  
 
ಎಲೆ ವೈದಿಕರಿರಾ, ನಿಮಗೆ ಸತ್ವಬಲ ವೇದವಲ್ಲದೆ ಮತ್ತೇನೂ ಇಲ್ಲ. ಆ ವೇದವೆ ಸ್ವಯಂಭುಯೆಂದು ನುಡಿವಿರಿ, ನಾ ನಿಮಗೆ ತಿಳಿಯ ಪೇಳುವೆ. ಆದಿಸಿದ್ಧಾಂತವಿಡಿದು ವೇದ ಸ್ವಯಂಭುವಲ್ಲ. ಆದಿಮೂಲ ಶಿವನಿಂದಾದವೀ ವೇದಂಗಳು ಕೇಳಿರೆ. ಶಿವನಿಂದಾದ ಮೂವತ್ತಾರುತತ್ತ್ವದೊಳೈದನೆಯದು ಆಕಾಶತತ್ತ್ವವು. ಆ ಆಕಾಶತತ್ತ್ವದಿಂದಾದ ಶಬ್ದ ವಿಷಯವು ನಿತ್ಯವೆ ಹೇಳಿರೆ. ಪಂಚಭೂತಂಗಳೊಳಗೊಂದು ಭೂತವಿಷಯವಾ ಶಬ್ಧ. ಆ ಶಬ್ದ ಸಂಬಂಧವಾದ ವೇದಕ್ಕೆ ನಿತ್ಯವೆಲ್ಲಿಯದು ಹೇಳಿರೆ. ಆ ವೇದ ತನಗೆ ತಾನಾದುದೆಂಬಿರೆ. ಎಂಬಿರಾದಡೆ ಪ್ರಳಯಾಂತಕಾಲದಲ್ಲಿ ಅಳಿಯವೀ ವೇದಾದಿ ವಿದ್ಯೆಗಳು. ಜಗತ್ ಸೃಷ್ಟಿಕಾಲದಲ್ಲಿ ಆದಿಕರ್ತಾರ ಸೃಷ್ಟಿ ಸ್ಥಿತಿ ಲಯ ಪ್ರೇರಕಶಿವನಿಂದಾದವು ಕೇಳಿರೆ. ಚರಣಬಹ ಸೂಕ್ತಿಗಳಲ್ಲಿ ಕೇಳ್ದರಿಯಿರೆ. ಋಗ್ವೇದಕ್ಕೆ ದೇಹ ಉರುವರ್ಣ, ಅತ್ರಿಗೋತ್ರ, ಗಾಯತ್ರಿ ಛಂದ, ಅಧಿದೇವತೆ ಬ್ರಹ್ಮ. ಯಜುರ್ವೇದಕ್ಕೆ ಅಬ್ಜದಳಾಯತ ನೇತ್ರ, ಕುಂಚಿತ ಚಿಬುಕು ಮುಂಗೂರ ಮೀಸೆ, ತಾಮ್ರವರ್ಣದೇಹ, ಭಾರದ್ವಾಜಗೋತ್ರ, ತ್ರಿಷ್ಟುಪ್ ಛಂದ, ಅಧಿದೇವತೆ ವಿಷ್ಣು. ಸಾಮವೇದಕ್ಕೆ ದೇಹ ಶ್ವೇತವರ್ಣ, ಕಾಶ್ಯಪಗೋತ್ರ, ಜಗತಿ ಛಂದ, ಅಧಿದೇವತೆ ಈಶ್ವರನು. ಧವಳಶೃಂಗವೆರಡು ಅಥರ್ವಣವೇದಕ್ಕೆ ದೇಹ, ಕೃಷ್ಣವರ್ಣ, ವೈಭಾನುಗೋತ್ರ, ಅನುಷ್ಟುಪ್ ಛಂದ, ಅಧಿದೇವತೆ ಇಂದ್ರನು. ಇಂತು ಶ್ರುತಿಗಳಿಗೆ ಶರೀರವರ್ಣ, ಗೋತ್ರ, ಛಂದ, ಅಧಿದೇವತೆಗಳಿಂತಿರಲು, ತಮಗೆ ತಾವಾದವೆಂದು ನೀವು ನುಡಿವ ಪರಿ ಹೇಗೆ ಹೇಳಿರೆ ವೈದಿಕರಿರಾ. ಇವೇ ನಿತ್ಯವೆಂಬಿರಾದಡೆ ಲಯಗಮನಸ್ಥಿತಿಯುಂಟು ಕೇಳಿರೆ. ಹೃದಯ ದೈವ ಗಾಯತ್ರಿ ಸರ್ವವೇದೋತ್ತಮೋತ್ತಮ ಲಿಯಂಕೇ ಮೂರ್ದ್ನಿ ವೈವೇದಾಸಷದೊ ಎನಲು, ಆತ್ಮದೃಷ್ಟಿ ನೇತ್ರದೃಷ್ಟಿಯ ಪ್ರಮಾಣದಿಂ ನಮ್ಮ ಟರುರಿವಿಂದರಿದೆವೆಂಬರೆ, ನಿಮ್ಮ ನೀವರಿಯದವರು ಈ ಜಗದಾದಿಯನೆಂತರಿದಿರೆನಲು, ಜ್ಞಾನಸಾಧನವಹ ಶಾಸ್ತ್ರಾದಿಗಳಿಂದ ಜ್ಞಾನೇಂದ್ರಿಯ ಪ್ರಮಾಣ ನೇತ್ರದಿಂದರಿದವೆನಲು, ನಿಮಗೆ ಜ್ಞಾನೇಂದ್ರಿಯ ಸಾಧನ ನೇತ್ರಗಳೆಲ್ಲಿಯವು. ಈಶ್ವರನ ನಯನಾಶ್ವವೆನಿಸುವ ರವಿಚಂದ್ರಾಗ್ನಿ ತೇಜಸ್ಸಿಂದಲ್ಲದೆ, ಜಾತ್ಯಂಧರು ನೀವು ನಿಮಗೆಲ್ಲಿಯ ದೃಷ್ಟಿವಾಳತನ. ಅತಿಮತಿವಂತರೆನಿಸುವ ದೇವತೆಗಳುಂ ಕಾಣಲರಿಯರು. ಮತಿವಿಕಳರು ನೀವು ಕಾಣಲರಿದಿರೆಂತು ಜಗದಾಗುಹೋಗುಗಳ. ನೋಡಿಯರಿದೆವೆನಲು ಜಗವನಾಡಿ ನೀವು ಮೊನ್ನಿನವರು, ಸಾಮಾನ್ಯಮನುಜರು: ಜಗದನಾದಿಯ ನೀವೆಂತರಿದಿರೆನಲು, ಅದು ಕಾರಣ, ಜಗ ನಿರ್ಮಾಣಕ ಜಗ ಭ್ರಮಣ ಲೀಲಾಲೋಲ ಜಗದಂತರ್ಯಾಮಿ ಜಗತ್ರೈರಕ್ಷಕನೊಬ್ಬನೆಯರಿವ ನಿಮಗರುವಿಲ್ಲೆನಲು, ವೇದ ಶಾಸ್ತ್ರಾಗಮಾದಿಗಳಿಂ ಪ್ರಮಾಣಿಸಿ ಅರಿದೆವೆನಲು, ನಿಮಗೆ ಶ್ರುತಿ ಪ್ರಮಾಣ ಯೋಚನೆಯದೆಲ್ಲಿಯದು `ಜಗತಾಂ ಪತಯೇ ನಮಃ' ಎಂದು ಶ್ರುತಿಯಿರಲು, ಇದು ಕಾರಣ, ವೇದಾದಿಶಾಸ್ತ್ರಂಗಳಿಂದ ನಿಮಗೇನು ಆಗದು, ಪಾಠಕರರುಹಿರಲ್ಲದೆ. ಶ್ರುತಿಃ `ಶಿವೋ ಮಾಯೇವ ಪಿತರೌ' ಎನಲು, ಶಿವನೇ ವೇದಂಗಳಿಗೆ ತಂದೆ ತಾಯಾಗಿರಲು, ಜಗತ್ತಿಂಗೊಡೆಯನಾಗಿರಲು, `ಪಿತಾತದಸ್ಯಮಾ' ಎಂದು ಪಿತನೆ ಶಿವನು ತಾಯಿಪುತ್ರರೆಂದೆನಲು, ವೇದಸ್ವಯಂಭು ಜಗನಿತ್ಯವೆಂಬ ಪರಿಯೆ ಹೇಂಗೆ ಹೇಳಿರೆ. ಪೂರ್ವದಲ್ಲಿ ವೇದಪುರುಷರು, ಶಾಂಭವವ್ರತಿಗಳು, ಪಾಶುಪತವ್ರತಸ್ಥರು, ಶಿವಸಿದ್ಧಾಂತ ಭಕ್ತಿನಿಷ್ಠಾ ಸಾವಧಾನವ್ರತರು. ವೇದಾಧಾರಯಂತಿ ಎನಲು, ರುದ್ರಾಕ್ಷಧಾರಣ ಚತುರ್ವಿಧವ್ರತಿಗಳಿಗೆ ಮುಖ್ಯ ತ್ರಿಯಾಯುಷಂ ಜಮದಗ್ನೇಃ ಕಶ್ಯಪಸ್ಯತ್ರಿಯಾಯುಷಂ | ಅಗಸ್ತಸ್ಯ ತ್ರಿಯಾಯುಷಂ ಯದ್ದೇವಾನಾಂ ತ್ರಿಯಾಯುಷಂ | ತನ್ಮೇ ಅಸ್ತು ತ್ರಿಯಾಯುಷಂ' ಎನಲು, ಭಸ್ಮಾವಾಲಿಪ್ತರು ತ್ರಿಪುಂಡ್ರಾಂಕಿತನಿಷ್ಠರಾಗಿರದೆ, `ವೇದಾಶ್ಚಕಾವಯಂತಿ' ಎನಲು, `ತದಾಸ್ಮಾಮಿ' ಎನಲು, ತದಾಸ್ಮಾಮಿಯನೆ ಶಿವಚರಣಸಲಿಲ ಪ್ರಸಾದ ಸುಭೋಗ ಸಾವಧಾನಿಗಳೆಂದು ತಾವೆ ಹೇಳುತ್ತಿರಲು, ವೇದಾಗಮಶಾಸ್ತ್ರಗಳಿಗೂ ಪಂಚಾಕ್ಷರಿಮಂತ್ರಗಳಲ್ಲಿಯೆ ಉದಯ ಸ್ಥಿತಿಲಯವೆನ್ನುತಿರಲು, ನೀವಾ ವೇದಂಗಳ ಸ್ವಯಂಭೂಯೆಂದೂ ನಿತ್ಯವೆಂದೂ ಜಗವನೆನಬಹುದೆ. ಅದು ಕಾರಣ, ಈ ಜಗಂಗಳನು ತನ್ನ ಲೀಲೆಯಿಂದಲೆ ನಿರ್ಮಿಸುವ ಭವನೆನಿಸಿ, ತನ್ನ ಲೀಲೆಯಿಂದಲೆ ರಕ್ಷಿಸುವ ಮೃಡನಾಗಿ, ತನ್ನ ಲೀಲೆ, ಈ ಲೀಲೆಯಿಂದಲೆ ಸಂಹರಿಸುವ ಹರನಾಗಿ, ಲೀಲಾತ್ರಯರಹಿತನಾಗಿ ಶಿವನೆನಿಸುವ, || ಶ್ರುತಿ || `ಆದಿ ವೇದಸ್ಯ ಶಾಸ್ತ್ರಾಣಿ ಮಂತ್ರ ಪಂಚಾಕ್ಷರೇ ಸ್ಥಿತಾ' ಎಂದುದಾಗಿ, ಇದು ಕಾರಣ, ಉದ್ದೈಸುವ ರಕ್ಷಿಸುವ ಸಂಹರಿಪ ಭವಮೃಡಹರನಾದ ಶಿವನಿರಲು, ನೀವು ವೇದಸ್ವಯಂಭು ಜಗನಿತ್ಯವೆನಲಾಗದು. ||ಶ್ರುತಿ|| `ಪರವೋ ಭವಂತಿ' ಎನಲು, ವೇದ ದೇವತಾ ಸೃಷ್ಟಿಯೆನಲು, ಈಹಿಂಗೆ ವೇದಂಗಳು ಶಿವನಿಂದ ತಮಗೆ ಉದಯಸ್ಥಿತಿಲಯವೆನಲು, ಈ ಜಗ ಸೃಷ್ಟಿಸ್ಥಿತಿಲಯ ಕಾರಣ ಸರ್ವಜ್ಞ ಸರ್ವೇಶ್ವರ ಸರ್ವಕತೃ `ಏಕ ಏವ ರುದ್ರೋ ನ ದ್ವಿತೀಯಾಯ ತಸ್ಥೇ' ಎನಲು, ಒಬ್ಬನೆ ಶಿವನು ಎರಡೆನಿಪ ದೇವರಾರುಯಿಲ್ಲವೆಂದರಿದಿರಿ. ವೈದಿಕರಿರಾ, ವೇದಸ್ವಯಂಭುವಲ್ಲ ಶಿವನ ಶಿಶುಗಳು. ಜಗವು ನಿತ್ಯವಲ್ಲ. ಶಿವನ ಆಜ್ಞಾವಶವರ್ತಿಗಳು. ಅಹಂಗಾಗಲದಕ್ಕೇನು ವೈದಿಕಾಚರಣೆಯನಾಚರಿಸುವ ವೈದಿಕ ವ್ರತಿಗಳಿಗೆ ಸಾಧನವೆನಿಸುವ ವೇದಮಂತ್ರಂಗಳೆ ದೈವವೆನಲು, ವೇದಂಗಳೆ ದೈವವಾದಡೆ ಪಕ್ಷೀಶ್ವರನ ಕೈಯ ಸಿಲುಕುವುದೆ. ವೇದವೆ ದೈವವಾದಡೆ ಮುನೀಶ್ವರನಿಂದ ಅಳಿದುಹೋಗಿ ವೇದವ್ಯಾಸನಿಂದ ಪ್ರತಿಷ್ಠಿತವಹುದೆ. ವೇದವೆ ದೈವವಾದಡೆ ಶುನಕನಪ್ಪುದೆ, ವೇದವೆ ದೈವವಾದಡೆ ದಕ್ಷನಳಿವನೆ. ವೇದವೆ ದೈವವಾದಡೆ ತಮ್ಮಜನ ಶಿರಹೋಹಂದು ಸುಮ್ಮನಿಹವೆ. ವೇದವೆ ದೈವವಾದಡೆ ಕವಿತೆಗೊಳಗಾಹುದೆಯೆಂದು ಎನಲು, `ಆಘ್ರಾಯಘ್ರಾಯಾವದಂತಿ ವೇದ ಶ್ವಾನಶ್ಶನೈಶ್ಚನೈಃ ಯತ್ಸದಾನಿಮಹಾದಿವಾಂತಂ ವಂದೇ ಶಭರೇಶ್ವರಂ' ಇಂತೆಂದುದಾಗಿ, ಇದು ಕಾರಣ, ಶಿವನೇ ಸ್ವಯಂಭು ನಿತ್ಯವೆಂದರಿದ ವಿಪ್ರರೇ ವೈದಿಕೋತ್ತಮರು, ಬಸವಪ್ರಿಯ ಕೂಡಲಚೆನ್ನಸಂಗಯ್ಯ.