Index   ವಚನ - 88    Search  
 
ಶ್ರವವೆತ್ತಿ ನಡೆವಾಗ ಸ್ಮಶಾನವೈರಾಗ್ಯವಹುದು. ಪುರಾಣಂಗಳ ಕೇಳುವಲ್ಲಿ ಪುಸ್ತಕವೈರಾಗ್ಯವಹುದು. ನೆಟ್ಟನೆ ಶರಣಚಾರಿತ್ರವ ಕೇಳುವಲ್ಲಿ ಮರ್ಕಟವೈರಾಗ್ಯವಹುದು. ಏನನೋದಿಯೂ ಏನ ಕೇಳಿಯೂ ಏನೂ ಫಲವಿಲ್ಲ. ಹಿಂದೆ ಸತ್ತುದ ಕೇಳುತ್ತಿದೇನೆ. ಮತ್ತೆಯೂ ಎನ್ನ ಅನ್ವಯದವರು ಅಲಿವುದ ಕಾಣುತ್ತಿದ್ದೇನೆ. ಶುನಕ ಬೂದಿಯೊಳು ಮಲಗಿರ್ದಲ್ಲಿ ತನ್ನಾದಿಯ ನೆನೆದು, ದೇಹದಿಚ್ಛೆಯ ಹಳಿದು, ಜನನ ಜಾಡ್ಯವ ಪರಿವೆನೆಂದು ಯೋಚಿಸುತ್ತಿರಲು, ಮೆಲ್ಲನೆ ನಿದ್ರೆ ತಿಳಿಯಲು, ಆಗ ತನ್ನಾದಿಯ ಮರೆದು, ಭ್ರಾಂತೆಡೆಗೊಂಡು, ಕಿವಿಯ ಕೊಡಹುತ್ತ ಹಡಿಕೆಗೆ ಹರಿವಂತೆ ಎನ್ನ ಮುಕ್ತಿ. ಇಂತಪ್ಪ ಅನುಕ್ತಿಯನಳಿದು, ದೇಹದಿಚ್ಛೆಯ ಹಳಿದು, ಪರಮವಿರಕ್ತಿಯನಿತ್ತು ರಕ್ಷಿಸಯ್ಯಾ, ಬಸವಪ್ರಿಯ ಕೂಡಲಚೆನ್ನಸಂಗಮದೇವಾ.