Index   ವಚನ - 96    Search  
 
ಸಾಮವೇದಿಗಳು ಶ್ವಪಚಯ್ಯಗಳ ಹಸ್ತದಲ್ಲಿ ಗುರುಕಾರುಣ್ಯವ ಪಡೆದು, ಅವರೊಕ್ಕುದ ಕೊಂಡು ಕೃತಾರ್ಥರಾದಂದು ಎಲೆ ವಿಪ್ರರಿರಾ ನಿಮ್ಮ ಕುಲಂಗಳೆಲ್ಲಿಗೆ ಹೋದವು? ಕೆಂಬಾವಿ ಭೋಗಯ್ಯಗಳ ಮನವ ಶಿವನಂದು ನೋಡಲೆಂದು ಅನಾಮಿಕ ವೇಷವ ಧರಿಸಿ ಬರಲು, ಅವರನಾರಾಧಿಸಲು, ಭೋಗತಂದೆಗಳ ನೆರೆದ ದ್ವಿಜರೆಲ್ಲರು ಪುರದಿಂದ ಪೊರಮಡಿಸಲು, ಪುರದ ಲಿಂಗಗಳೆಲ್ಲವು ಬೆನ್ನಲುರುಳುತ್ತ ಪೋಗಲು, ದುರುಳ ವಿಪ್ರರೆಲ್ಲರು ಬೆರಳ ಕಚ್ಚಿ ತ್ರಾಹಿ ತ್ರಾಹಿ, ಕರುಣಾಕರ ಮೂರ್ತಿಯೆಂದು ಶರಣುಹೊಕ್ಕು ಮರಳಿ ಬಿಜಯಂಗೈಸಿಕೊಂಡು ಬಾಹಂದು, ನಿಮ್ಮ ಕುಲಾಭಿಮಾನವೆಲ್ಲಿಗೆ ಹೋದವು ಹೇಳಿರೆ? ಈಶನೊಲಿದು ಚೆನ್ನಯ್ಯಗಳ ಏಕೋನಿಷ್ಠೆಯ ಸ್ಥಾನದಾನ ಸಮರ್ಪಣಭಾವ ಬಲಿದು, ಅಭವ ಪ್ರತ್ಯಕ್ಷನಾಗಿ ಕೈದುಡುಕಿ ಸಹಭೋಜನವ ಮಾಡುವಂದು, ನಿಮ್ಮ ವೇದಾಗಮ ಶ್ರುತಿಮಾರ್ಗದಾಚಾರವೆಲ್ಲಿಗೆ ಹೋದವು ಹೇಳಿರೆ? ಬೊಬ್ಬೂರಲ್ಲಿ ಬಿಬ್ಬಿಬಾಚಯ್ಯಗಳು ಹರನ ಗಣಂಗಳ ನೆರಹಿ, ಪರಮಾನಂದದಿಂ ಗಣಪರ್ವವಂ ಮಾಡಿ, ಗಣಪ್ರಸಾದಮಂ ಪುರದವೀಥಿಗಳೊಳು ಮೆರಸುತ್ತ ಬರಲು, ನೆರೆದ ವಿಪ್ರರೆಲ್ಲರು ಉಚ್ಛಿಷ್ಟಾ ಚಾಂಡಾಲವೆಂದು ದೂಷಿಸಿ, ಬಂಡಿಯಂ ಮುರಿದು ತಂಡತಂಡದ ಭಕ್ತರನೆಲ್ಲನವಗಡಿಸುತ್ತಿರಲು, ಹರಹರ ಮಹಾದೇವ ಮಹಾಪ್ರಸಾದ ಪರಂಜ್ಯೋತಿಯೆಂದು ಪ್ರಸಾದಮಂ ಕೈಯೆತ್ತಿ ಸೂಸಲು, ಪುರವೆಲ್ಲ ಬೆಂದು ಗಡ್ಡದ ಜನರೆಲ್ಲರು ಘರಿಘರಿಲ್ಲದೆ ಉರಿದು ಕರಿಯಾಗಲು, ಉಳಿದ ವಿಪ್ರರೆಲ್ಲರೂ ತ್ರಾಹಿ ತ್ರಾಹಿ, ಶರಣಾಗತ ರಕ್ಷಕರಿರಾ ಒಮ್ಮೆಗೆ ಕಾವುದೆಂದು ಧರೆಯೊಳು ಬಿದು ಬೆರಳಕಚ್ಚುವಂದು, ಅಂದು ನಿಮ್ಮ ಆಗಮಾರ್ಥದ ಕುಲಾಚಾರ ಮಾರ್ಗವೆಲ್ಲಿಗೆ ಹೋದವು ಹೇಳಿರೆ. ಸಾಕ್ಷಿ: ಸ್ತ್ರೀ ವಾಚಧಪುರುಷಃ ಷಂಡಶ್ಚಾಂಡಾಲೋ ದ್ವಿಜವಂಶಜಃ | ನ ಜಾತಿಭೇದೋ ಲಿಂಗಾರ್ಚೇ ಸರ್ವೇ ರುದ್ರಗಣಾಃ ಸ್ಮೃತಾಃ || ಇದು ಕಾರಣ, ಶರಣರಿಗೆ ಪ್ರತಿಯಿಲ್ಲ. ಬೆರಳನೆತ್ತದೆ ಇಕ್ಕಿದ ಮುಂಡಿಗೆಯನಾ ಸರ್ವರೆತ್ತಿಕೊಳ್ಳರೆ ದ್ವಿಜರು, ಬಸವಪ್ರಿಯ ಕೂಡಲಚೆನ್ನಸಂಗಯ್ಯನೊಬ್ಬನೆಂದು.