Index   ವಚನ - 171    Search  
 
ಆನಂದಸ್ಥಳದಲ್ಲಿ ಊರ್ಧ್ವ ಕಂಜಕನ್ನಿಕೆಗೆ ಇಂದುವಿನ ಕೊಡನ ಹೊತ್ತಾಡುತ್ತೈದಾಳೆ. ಮೂಲಪಟ್ಟಣದಲ್ಲಿ ಮೂವರಿಗೆ ರತಿಯ ಹುಟ್ಟಿಸುತ್ತೈದಾಳೆ. ಅಪರಪಟ್ಟಣದಲ್ಲಿ ಹಲವರಿಗೆ ಆಶ್ರಯವಾಗಿ ಐದಾಳೆ. ಮಧ್ಯಮಪಟ್ಟಣದಲ್ಲಿ ಮಹಾಮಹೀಶ್ವರರಿಗೆ ಮಹಾದಾಶ್ರಯವಾಗಿ ಐದಾಳೆ. ಇಂತು ಪಟ್ಟಣ ಹದಿನೆಂಟಕ್ಕೆ ಸೀಮೆ ಇಪ್ಪತ್ತೈದು, ಗ್ರಾಮ ಮೂವತ್ತಾರು ಸಂಯೋಗವೆಂಬ ನಗರಿಯಲ್ಲಿ ನಿತ್ಯಸಾನಂದನೆಂಬಾತ ಕುಳ್ಳಿದ್ದು, ಪಟ್ಟಣ ಹದಿನೆಂಟರ ವ್ಯಾಪ್ತಿಯ ತಳವಾರರೆಂಟು ಮಂದಿಯ ಗ್ರಾಮ ಬಂಧನೆಯ ಮಾಡಲೀಯದೆ ಸುಚಿತ್ತದಿಂ ನಡಸುತ್ತೈದಾನೆ. ನೆನೆವ ಮನಸ್ಸಿನಲ್ಲಿ ಅವಿತಥವಿಲ್ಲದೆ ಚಿತ್ತವೃತ್ತಿಯನ್ನರಿತು ಮಹಾಲೋಕದಲ್ಲಿಪ್ಪ ಮೂನ್ನೂರ ಮೂವತ್ತಮೂರು ಕುಲದುರ್ಗಂಗಳಂ ಪಾಟಿಸಿ ಸುಯಿಧಾನಿಯಾಗಿರುತ್ತೈದಾನೆ. ಅಜಲೋಕದಲ್ಲಿ, ಶುದ್ಧಸಂಯೋಗ ಸಂಗಮವೆಂಬ ಗೃಹದಲ್ಲಿ, ಮೂಲಕ ಮುಕ್ತಕ ರುದ್ರಕ ಅನುಮಿಷಕ ಆಂದೋಳಕ ವಿಚಿತ್ರಕ ಸಕಲ ಮುಕ್ತಾಯಕ್ಕ, ಸಾನಂದ ಸತ್ಯಕ್ಕ ಇಂತಪ್ಪ ಮಹಾಸ್ತ್ರೀಯರ ಚಿತ್ತಕ್ಕೆ ಸಗುಣವಪ್ಪುದನೊಂದನೆ ಕೂಡಿ ಭೋಗಿಸುತ್ತೈದಾನೆ. ಅವರು ಸ್ತ್ರೀಯರು, ತಾ ಪುರುಷನಾಗಿ ಕೂಡುತ್ತೈದಾನೆ, ಅವಿತಥವಿಲ್ಲದೆ ಆ ಕೂಟದ ಸುಖವನು ಶಿಶು ಬಲ್ಲ, ಶಿಶುವಿನ ಜನನವನು ಅವ್ವೆ ಬಲ್ಲಳು. ಅವ್ವೆಯ ಇಚ್ಛಾ ಮಾತ್ರದಲ್ಲಿದ್ದು ಕಪಿಲಸಿದ್ಧಮಲ್ಲಿಕಾರ್ಜುನಯ್ಯನೆಂಬ ತ್ರೈಲಿಂಗಕ್ಕೆ ಮೂಲವಾದಳವ್ವೆ.