ವಚನ - 559     
 
ತತ್ವಮಸಿಯೊಳಗೆ ನಿತ್ಯ ಹೊಕ್ಕಿಪ್ಪುದನು ಮತ್ತೆ ಶೂನ್ಯಾಂಗರಿಗೆ ಅರಿಯಲಹುದೆ? ಕಡಲ ಒಳಗಿಹ ಕಿಚ್ಚು ಕಡಲ ಸುಡದಿಹ ಭೇದ ಒಡಗೂಡಿದಾ ಭೇದ, ಶರಣರಿಗಾ ಕಡಲ ದಾಂಟಿಯೆ ನಿಂದು ತಡಿಯೊಳಗೆ ತಾ ಮಿಂದು ಒಡಗೂಡಿದನು ಶುದ್ಧಧವಳಾಂಗನ ಹಲವು ಚಿತ್ತವು ಬಿಟ್ಟು ಗುರುವಿನ ಅನುಮತ ಅನಿಮಿಷಲಿಂಗದ ಭೇದವನರಿದು ತನುತ್ರಯದ ಮಲತ್ರಯದ ಅನುಭೇದವನು ಸುಟ್ಟು, ತನುಜ್ಞಾನಿ ಸಂಬಂಧಿಲಿಂಗ ಮೂರರೊಳಗೆ ಅಂಗಸುಖವನೆ ಬಿಟ್ಟು ಲಿಂಗಸುಖಿ ತಾನಾಗಿ ಮಂಗಳಾಂಗನಾದಿ ಕಪಿಲಸಿದ್ಧಮಲ್ಲೇಶ್ವರ.