Index   ವಚನ - 793    Search  
 
ಬಲ್ಲೆ ಬಲ್ಲೆ ನಿನ್ನ, ಜನನ ಮರಣಕ್ಕೆ ಹೊರಗಾದೆನೆಂಬುದ. ಬಲ್ಲೆ ಬಲ್ಲೆ ನಿನ್ನ, ಕಾಲಕಲ್ಪಿತಕ್ಕೆ ಹೊರಗಾದೆನೆಂಬುದ. ಬಲ್ಲೆ ಬಲ್ಲೆ, ನೀನು ಮಹಾನಿತ್ಯ ಮಂಗಳನೆಂಬುದ. ಬಲ್ಲೆ ಬಲ್ಲೆ, ನೀನು ಸತ್ಯಶುದ್ಧದೇವನೆಂಬುದ. ಬಲ್ಲೆ ಬಲ್ಲೆ, ನೀನು ಫಲಪದವ ಮೀರಿದನೆಂಬುದ. ಬಲ್ಲೆ ಬಲ್ಲೆ, ನೀನು ಉರುತರ ಲೋಕಪ್ರಕಾಶನೆಂಬುದ. ಬಲ್ಲೆ ಬಲ್ಲೆ, ನೀನು ಪರಿಭವಕ್ಕೆ ಬಾರನೆಂಬುದ. ಬಲ್ಲೆ ಬಲ್ಲೆ, ನೀನು ಕಾಲನ ಕಮ್ಮಟಕ್ಕೆ ಸಲ್ಲನೆಂಬುದ. ಎಲ್ಲ ಬಲ್ಲತನಕ್ಕೆ ಮಂಗಳವನೀಯೆ ಉತ್ತರ ದಕ್ಷಿಣ ಪೂರ್ವ ಪಶ್ಚಿಮವೆಂಬ ದ್ವಾರಂಗಳಲ್ಲಿ ತಪ್ಪದೆ ಬಪ್ಪಾಗ ಆನು ನಿನ್ನೊಡನೆ ಬಾರದೆ ಉಳಿದುದುಂಟೆ? ಆನೇನು ಭೇದವಾಗಿಪ್ಪೆನೆಲೆ ಅಯ್ಯಾ. ಸಂದು ಸವೆದು ಹಂಗು ಹರಿದು ಲೀಯ ಒಳಗಾಗಿದ್ದ ಎನ್ನ ನೋಡದೆ ಇಪ್ಪುದು ಅದಾವ ಗರುವತನ? ಕಪಿಲಸಿದ್ಧಮಲ್ಲಿಕಾರ್ಜನಾ.