ವಚನ - 948     
 
ಯೋ ದೇಹಿರೂಪಃ ಪರಮಸ್ಸುಖೋಪಿ ಯೋ ಭೂಷಭೂಷಃ ಪರಮಾತ್ಮಲಿಂಗಂ! ಯೋ ಲೋಕನಾಥೋ ಮಮ ಲೋಕದಾಯೀ ಯೋ ದೇಹಿದೇಹೋ ಮಮ ದೇಹಶೇಷಃ || ಎಂದೆನಿಸಿದ ಬಸವಾ. ಎಲ್ಲ ಲೋಕತ್ರಯಪ್ರತಿಪಾದಿತ ಶಬ್ದದಲ್ಲಿ ಘನಗಂಭೀರವಾದ ಬಸವಾ. ಬಕಾರಸಂಬಂಧ ಬಹುಧಾಮರೂಪ ಬಸವಾ, ನೀನೆಲ್ಲಡಗಿದೆಯೊ ಬಸವಾ? ಕಾಲಕಲ್ಪಿತನಷ್ಟವಾಗಿ ಕಾಲಕಲ್ಪಿತಂಗಳನರಿದೆಯೊ ಬಸವಾ, ಅರಿದ ಮೂರ್ತಿಯ ನಿಮ್ಮಲ್ಲಿ ಕುರುಹಿಟ್ಟುಕೊಂಡಿರೆ ಬಸವಾ. ಇಷ್ಟ ಬ್ರಹ್ಮಾಂಡವ ಘಟ್ಟಿಗೊಳಿಸಿದಿರಿ ಬಸವಾ, ಲಿಂಗದೃಷ್ಟಿಯ ರೂಪ ನಷ್ಟವ ಮಾಡಿದಿರಿ ತಂದೆ ಗುರುಬಸವಾ, ಗುಣವೆಲ್ಲಡಗಿದವೊ ಬಸವ ಗುರುವೆ, ಮನವೆಲ್ಲಡಗಿತ್ತೊ ಮಹಾಬಸವಾ? ಕಾಯಗುಣ ಮನಸುಮನಂಗಳು ನಿಮ್ಮಲ್ಲಡಗಿದವೆ ಬಸವ ತಂದೆ? ಎಲೆ ಬಸವಲಿಂಗವೆ, ಎನ್ನ ಕಪಿಲಸಿದ್ಧಮಲ್ಲಿನಾಥಯ್ಯಾ, ಬಸವಾ ಬಸವಾ ಬಸವಾ!