ವಾದ ಬುದ್ಧಿಯ ಬಲ, ವಾದ ಅಭ್ಯಾಸದ ಬಲ;
ಮಹತ್ವ ಸುಕೃತದ ಫಲ, ಮಹತ್ವ ಸಿದ್ಧಿಯ ಬಲ;
ಅರಿವು ಜ್ಞಾನದ ಬಲ, ಅರಿವು ಸಜ್ಜನಸಹವಾಸದ ಬಲ.
ಅರಿವು ಬಾಹ್ಯದಲ್ಲಿ ಇಷ್ಟಲಿಂಗ,
ಅರಿವು ಅಂತರಂಗದಲ್ಲಿ ಪ್ರಾಣಲಿಂಗ,
ಅರಿವು ಭಾವದಲ್ಲಿ ಆತ್ಮಲಿಂಗ.
ಇದು ಕಾರಣ,
ವಾದಿಸಿದಲ್ಲಿ ಹುರುಳಿಲ್ಲ,
ಮಹತ್ವ ಮಾಡುವಲ್ಲಿ ಹುರುಳಿಲ್ಲ.
ಲಿಂಗಜ್ಞಾನವೇ ಹುರುಳು,
ಕಪಿಲಸಿದ್ಧಮಲ್ಲಿಕಾರ್ಜುನಾ.