ವಚನ - 1010     
 
ಶುದ್ಧವೆ ತದ್ರೂಪವಾಗಿ ಬಾರನೆ ಅಂದು ಅನಾಹತನೆಂಬ ಗಣೇಶ್ವರನು ಬಂದೆನ್ನ ಜರಿಯನೆ? ಜರಿದರೆ ನೀನು ಕೊಟ್ಟ ತಲೆಯ ಹುಣ್ಣ ಕಣ್ಣೆಂದು ತೆರೆದು ಲಜ್ಜೆಗೆಡನೆ ಆನಾ ಗಣೇಶ್ವರನ ಕೈಯಲ್ಲಿ? ಶುದ್ಧಕಾತನೊಡೆಯ, ಸಿದ್ಧಕಾತನೊಡೆಯ, ಪ್ರಸಿದ್ದಾತನೊಡೆಯ! ಒಪ್ಪಿಪ್ಪಾರು ಆತನ ಸೀಮೆ. ಮೂವತ್ತಾರರ ಮೇಲಿಂದಾತನ ಸಂಯೋಗ. ಇಂತಪ್ಪಾತನ ನೀನೆನ್ನಲರಿಯದೆ ನೊಂದೆ ಕೆಲವು ದಿನ. ಈ ನೋವ ಮಾಣಿಸಿದಾತನೂ ಆತನೆ, ಎನ್ನ ಭವವ ತಪ್ಪಿಸಿದಾತನೂ ಆತನೆ, ಆತನಿಂದ ಉರುತರ ಕೈವಲ್ಯಕ್ಕೆ ಕಾರಣಿಕನಾದೆ! ಆತನ ಪ್ರಸಾದದಿಂದ ನಿನ್ನವರ ಪಾದೋದಕ ಪ್ರಸಾದಕ್ಕೆ ಯೋಗ್ಯನಾದೆ. ಫಲಪದಕ್ಕೆ ದೂರವಾದೆ ಕಪಿಲಸಿದ್ಧಮಲ್ಲಿಕಾರ್ಜುನ, ಬಸವಣ್ಣನಿಂದ!