Index   ವಚನ - 1102    Search  
 
ಸ್ಥೂಲ ಸೂಕ್ಷ್ಮ ಕಾರಣನೆಂದೆಂಬರಲ್ಲಾ ನಿನ್ನನು. ಅದರ ಹಿಂದು ಮುಂದನರಿಯರು: ಬಂದ ಹಾಂಗೆ ನುಡಿವರು. ಸ್ಥೂಲಕ್ಕೆ ನೆಲೆ ಯಾವುದು, ಹೇಳಿಹೆ ಕೇಳಿರಾ ಮನುಜರಿರಾ. ಸ್ಥೂಲವದು ಅನೇಕ ಬ್ರಹ್ಮಾಂಡಗಳ ಮೀರಿಪ್ಪುದು; ಅದು ಸ್ಥೂಲವೆ? ಅಲ್ಲ, ಹಾಂಗಿರಲಿ. ಶ್ರೀ ಗುರುಸ್ವಾಮಿ ವಿಸ್ತಾರ ವಿಸ್ತಾರ ವಿಸ್ತಾರವೆಂದು ಕೊಟ್ಟ ಲಿಂಗವೀಗ ಸ್ಥೂಲ. ಆ ಲಿಂಗವು ಸಕಲ ವ್ಯಾಪ್ತಿಯ ತನ್ನೊಳಗೆ ಇಂಬಿಟ್ಟುಕೊಂಡ ಕಾರಣ ಸೂಕ್ಷ್ಮವಾದ. ಶಿಷ್ಯಕಾರಣ ಪರಶಿವಮೂರ್ತಿಯಾದ ಕಾರಣ ಕಾರಣವಾದ. ಎಲೆ ಗುರುವೆ, ಲಿಂಗವೆ, ಜಂಗಮವೆ, ನೀವು ಒಂದಾದ ಭೇದವ ಲೋಕದ ಜಡರೆತ್ತ ಬಲ್ಲರು? ಬಸವಣ್ಣ ಬಲ್ಲ. ಆ ಬಸವಣ್ಣ ಅವ್ವೆಯ ಮನೋನಾಥ. ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ, ಬಸವಣ್ಣನ ಪ್ರಸಾದವ ಕೊಂಡು ಭವಂ ನಾಸ್ತಿಯಾಗಿ ಬದುಕಿದೆನು.