Index   ವಚನ - 1205    Search  
 
ಅವ್ವಾ ಅವ್ವಾ, ನಾನೇನೆಂಬೆನೀ ವಿಚಿತ್ರವನು! ನೀರನೆರೆಯದೆ ಆದುದು ನೋಡವ್ವಾ ವೃಕ್ಷ; ಗಾಳಿಯಿಲ್ಲದೆ ಚಲಿಸುತ್ತಿಹುದು; ಋತುವಿದಾಗದೆ ಫಲವಾಗುವುದು. ಅದ ನೋಡಿ ನಮ್ಮ ಚೆನ್ನಬಸವಣ್ಣ ಮೊಳಕೆಯ ಚಿವುಟಿ ಒಗೆದ ನೋಡವ್ವಾ. ಅದೆ ಕಪಿಲಸಿದ್ಧಮಲ್ಲೇಶನ ರೂಪು ನೋಡವ್ವಾ.