Index   ವಚನ - 1257    Search  
 
ಇನಮಂಡಲದೊಳಗೆ ಕಿರಣವಡಗಿಪ್ಪಂತೆ, ಫಲವಹ ಬೀಜದಲ್ಲಿ ವೃಕ್ಷವಡಗಿಪ್ಪಂತೆ, ಇಂದುಕಾಂತ ರವಿಕಾಂತದಲ್ಲಿ ಜಲಬಿಂದು ಅಗ್ನಿ ಇಪ್ಪಂತೆ, ಸಂದ ಕ್ಷೀರದಲ್ಲಿ ಹೊಂದಿದ ದಧಿ ತಕ್ರ ನವನೀತ ಘೃತವಿಪ್ಪಂತೆ ಅಂಗದ ಮೇಲೆ ಲಿಂಗ ಸಾಹಿತ್ಯವಾಗಿ, ತನ್ನೊಳಗೆ ಆ ಲಿಂಗವ ಕಂಡು, ಲಿಂಗದೊಳಗೆ ತನ್ನ ಕಂಡು, ತನ್ನೊಳಗೆ ಸಮಸ್ತ ವಿಸ್ತಾರವನೆಲ್ಲವ ಕಂಡು, ಜಂಗಮಮುಖ ಲಿಂಗವೆಂಬ ಭೇದವನು, ಲಿಂಗಕ್ಕೆ ಜಂಗಮವೆ ಪ್ರಾಣವಾಗಿಪ್ಪ ಭೇದವನು, ಅಂಗದೊಳಗೆ ಲಿಂಗವೆ ಆಚಾರವಾಗಿ ಅಳವಟ್ಟ ವಿವರವನ್ನು, ಲಿಂಗಾಂಗಸ್ಥಲಸಂಬಂಧ ಸ್ಥಳಕುಳಂಗಳ ವಿವರವಾಗಿ ಇದ್ದಿತೆಂಬುದನು, ಕಂಗಳ ನೋಟಕ್ಕೆ ಗುರಿಯಾದ ಲಿಂಗವೆ ಅಂಗವನೊಳಕೊಂಬ ಭೇದವನು, ಸಂಗನ ಬಸವಣ್ಣ ಚೆನ್ನಬಸವಣ್ಣನಿಂದ ಕೃಪೆಮಾಡಿಸಿ ಎನ್ನನುಳುಹು, ಪ್ರಭುವೆ, ಕಪಿಲಸಿದ್ಧಮಲ್ಲಿಕಾರ್ಜುನದೇವಯ್ಯಾ.