ಮೂರಳಿದು ಮೂರಳವಟ್ಟುದೆ ಭಕ್ತಸ್ಥಲ.
ಮೂರಳಿದು ಮೂರಳವಟ್ಟುದೆ ಜಂಗಮಸ್ಥಲ.
ಅಳಿದು ಎಂದಡೆ,
ಇದ್ದ ಮನ ಲಿಂಕ್ಕೆ ಕೊಟ್ಟಾಗಳೆ [ಹೆಣ್ಣ] ಳಿದುದು;
ಇದ್ದ ಧನ ಜಂಗಮಕ್ಕೆ ಕೊಟ್ಟಾಗಳೆ ಹೊನ್ನಳಿದುದು;
ಇದ್ದ ತನು ಗುರುವಿಂಗೆ ಕೊಟ್ಟಾಗಳೆ [ಮಣ್ಣ] ಳಿದುದು.
ಅವರವರಾಚರಣೆಯ ನೋಡಿ ಕೊಡುವುದಲ್ಲದೆ,
ಬೇಡಿದ ಪರಿಯಲ್ಲಿ ಕೊಡುವುದೇನೋ ಅಯ್ಯಾ ?
ಸಿಂಧುಬಲ್ಲಾಳ ತನ್ನ ವಧುವ ಕೊಟ್ಟನೆಂದು ಹೇಳಿದಲ್ಲಿ,
ತನ್ನ ಹೆಂಡತಿಯನೇನಾದಡೂ ಕೊಟ್ಟನೆ? ಇಲ್ಲಿಲ್ಲ.
ಹೆಣ್ಣು ಎಂದಡೆ ತಾನು,
ಶರಣಸತಿ ಲಿಂಗಪತಿ ಎಂಬ ಭಾವದಿಂದ
ಲಿಂಗಕ್ಕೆ ಮನ ಕೊಟ್ಟು ವಧುವಾದನಲ್ಲದೆ
ತನ್ನಂಗನೆಯ ಕೊಡಲಿಲ್ಲವು.
[ಹೊನ್ನು] ಎಂದಡೆ ಜಂಗಮಕ್ಕೆ ಧನವ ಕೊಟ್ಟು
ನಿಧಿ ನಿಧಾನ ಒಲ್ಲವಾದನಲ್ಲದೆ,
ತನ್ನಂಗನೆಯ ಕೊಡಲಿಲ್ಲವು.
[ಮಣ್ಣು] ಎಂದಡೆ ತನ್ನ ತನುವ ಗುರುವಿಂಗೆ ಕೊಟ್ಟು
ಸ್ವಯಂಭುವಾದನಲ್ಲದೆ ತನ್ನಂಗನೆಯ ಕೊಡಲಿಲ್ಲವು.
ಹೆಣ್ಣು ಸಲ್ಲದು ಜಂಗಮಕ್ಕೆ ;
ಹೊನ್ನು ಸಲ್ಲದು ಲಿಂಗಕ್ಕೆ ;
ಮಣ್ಣು ಸಲ್ಲದು ಗುರುವಿಂಗೆ.
ಇದರ ಭೇದವನಂತವುಂಟು:
ತಿಳಿವಡೆ ಬಹು ದುರ್ಲಭ;
ತಿಳಿದು ನೋಡಿದಡೆ ಭಕ್ತಿಗೆ ಬಹು ಸುಲಭ.
ತಿಳಿದು ಮಾಡಿ ಮೋಕ್ಷವ ಹಡೆದರಲ್ಲದೆ,
ತಿಳಿಯದೆ ಮಾಡವರೇನು
ಮೇರುವಿನೊಳಗಿರುವ ಭಂಗಾರವನಾಗಲಿ,
ಸಮುದ್ರದೊಳಗಿರುವ
ನಿಧಿ ನಿಧಾನಂಗಳನಾಗಲಿ ತಂದಿಹರೇನೋ?
ಕಪಿಲಸಿದ್ಧಮಲ್ಲಿಕಾರ್ಜುನಾ,
ಇದರಿರವ ಹೇಳಿಕೊಡಯ್ಯಾ,
ಎನ್ನ ಪ್ರಾಣಗುರು ಚೆನ್ನಬಸವಣ್ಣನಿಂದ.