ಅಯ್ಯಾ, ನಿಮ್ಮ ಶರಣರಲ್ಲದವರ
ಮನೆ ಕೆಮ್ಮನೆ ಕಂಡಯ್ಯಾ.
ನಿಮ್ಮ ಶರಣರ ಮನೆ ನೆರೆವನೆ ನೋಡಾ ಎನಗೆ.
ಸಿರಿಯಾಳ ಮನೆಗಟ್ಟಿ ಬೇರೂರಿಗೆ ಒಕ್ಕಲು ಹೋದ.
ದಾಸಿಮಯ್ಯ ಮನೆಗಟ್ಟಿ ವ್ಯವಹಾರನಾಗಿ ಹೋದ.
ಸಿಂಧುಬಲ್ಲಾಳ ಮನೆಗಟ್ಟಿ
ಕೈಕೂಲಿಕಾರನಾಗಿ ಹೋದ.
ಗಂಗೆವಾಳುಕರು ಮನೆಗಟ್ಟಿ
ಲಿಂಗದ ಹೊಲಬನರಿಯದೆ ಹೋದರು.
ಇವರೆಲ್ಲರು ಮನೆಯ ಮಾಡಿ
ಮಹದ್ವಸ್ತುವನರಿಯದೆ,
ಸಾಲೋಕ್ಯ ಸಾಮೀಪ್ಯ ಸಾರೂಪ್ಯ
ಸಾಯುಜ್ಯವೆಂಬ
ಪದವಿಗೊಳಗಾದರು.
ನಿಮ್ಮ ಸಂಗನಬಸವಣ್ಣ ಬಂದು
ಕಲ್ಯಾಣದಲ್ಲಿ ಮನೆಯ ಕಟ್ಟಿದಡೆ,
ಮತ್ರ್ಯಲೋಕವೆಲ್ಲವು ಭಕ್ತಿಸಾಮ್ರಾಜ್ಯವಾಯಿತ್ತು.
ಆ ಮನೆಗೆ ತಲೆವಾಗಿ ಹೊಕ್ಕವರೆಲ್ಲರು
ನಿಜಲಿಂಗ ಫಲವ ಪಡೆದರು.
ಆ ಗೃಹವ ನೋಡಬೇಕೆಂದು
ನಾನು ಹಲವು ಕಾಲ ತಪಸಿದ್ದೆನು.
ಕಪಿಲಸಿದ್ಧಮಲ್ಲಿನಾಥಾ,
ನಿಮ್ಮ ಶರಣ ಸಂಗನಬಸವಣ್ಣನ ಮಹಾಮನೆಗೆ
ನಮೋ ನಮೋ ಎಂದು ಬದುಕಿದೆನು.