Index   ವಚನ - 1444    Search  
 
ಉದಕದಿಂದ ಅಭಿಷೇಕಂಗೈವಡೆ, ಒದರಿದವು ನೋಡಾ ನಿನ್ನುತ್ತಮಾಂಗದಲ್ಲಿ ಅರುವತ್ತೆಂಟುಕೋಟಿ ನದಿಗಳು. ಪುಷ್ಪವ ಧರಿಸುವಡೆ, ಚಂದ್ರಕಲಾ ಪ್ರಕಾಶವುಂಟು ನೋಡಾ ಜಟಾಗ್ರದಲ್ಲಿ ನೀರಾಜನವೆತ್ತುವಡೆ ಸೂರ್ಯಚಂದ್ರಾಗ್ನಿನೇತ್ರ ನೋಡಾ. ಸ್ತೋತ್ರವ ಮಾಡುವಡೆ, ವೇದಂಗಳು ಹೊಗಳಿ ಹೊಗಳಿ ಮೂಗುವಟ್ಟವು ನೋಡಾ. ನಿನ್ನ ಮುಂಭಾಗದಲ್ಲಿ ನಾಟ್ಯವನಾಡುವಂತೆ, ಅದುರಿದವು ನೋಡಾ ಅಜಾಂಡಂಗಳು ನಿನ್ನ ಪಾದಸ್ಪರ್ಶನದಿಂದ. ಚಾಮರವ ಬೀಸುವಡೆ, ನೋಡಾ ಹನ್ನೊಂದು ಕೋಟಿ ರುದ್ರಕನ್ನಿಕೆಯರ ಕೈತಾಳಧ್ವನಿಯು. ಚಂದನವ ಧರಿಸುವಡೆ, ನೋಡಾ ಮಲಯಾಚಲನಿವಾಸಿ. ವಸ್ತ್ರವ ಧರಿಸುವಡೆ, ನೋಡಾ ವ್ಯಾಘ್ರಾಸುರ ಗಜಾಸುರ ಚರ್ಮವಾಸಿ. ಭಸ್ಮವ ಧರಿಸುವಡೆ, ನೋಡಾ ಕಾಮನಸುಟ್ಟ ಭಸ್ಮ ಅಂಗದಲ್ಲಿ. ಅಕ್ಷತೆಯ ಧರಿಸುವಡೆ, ನೋಡಾ ಅಜಾಂಡಂಗಳ ದಾಟಿದ ಮಸ್ತಕ. ಅಂತಪ್ಪ ವಿಗ್ರಹವ ಪೂಜಿಸುವಡೆನ್ನಳವೆ? ಶರಣನ ಮುಖದಿಂದ ಬಂದ ಪದಾರ್ಥವ ಕೈಕೊಂಡು ಪೂಜಾ ಪ್ರೀತನಾಗಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನಾ.