Index   ವಚನ - 1699    Search  
 
ಶರಣಸ್ಥಲ ನೋಡುವಡೆ ಬಹು ಸುಲಭ ನೋಡಯ್ಯಾ. ಶರಣನು ತಿಳಿದು ತಿಳಿದು ಆಚರಿಪನು, ಮರೆದು ಮರೆದು ಆಚರಿಸುವನು. ಜ್ಞಾನದಿಂದ ಭೇದವಲ್ಲದೆ, ದೇಹದಿಂದ ಭೇದವಿಲ್ಲ ನೋಡಯ್ಯಾ. ಶರಣ ತನ್ನ ದೇಹವಲ್ಲದೆ ಹಕಾರ ಪ್ರಣವ ಮಾಡಿಟ್ಟ ; ನರನು ತನ್ನ ದೇಹವನೆ ದೇಹವೆಂದು ಜಡವೆಂದು ಪ್ರಳಯಕ್ಕೊಳಗು ಮಾಡಿಟ್ಟ. ಶರಣನ ದೇಹವೆಲ್ಲ ಪಂಚಾಕ್ಷರಮಯ ನೋಡಾ: ನಕಾರವೆ ಅಸ್ಥಿ, ಮಕಾರವೆ ಮಾಂಸ, ಶಿಕಾರವೆ ತ್ವಕ್ಕು ಮಕಾರವೆ ನಾಡಿ, ಯಕಾರವೆ ರೋಮ. ನಕಾರವೆ ರಸ, ಮಕಾರವೆ ರುಧಿರ, ಶಿಕಾರವೆ ಶುಕ್ಲ, ವಕಾರವೆ ಪಿತ್ತ, ಯಕಾರವೆ ಶ್ಲೇಷ್ಮ. ನಕಾರವೆ ಕ್ಷುಧೆ, ಮಕಾರವೆ ತೃಷ್ಣೆ, ಶಿಕಾರವೆ ನಿದ್ರೆ, ವಕಾರವೆ ಆಲಸ್ಯ, ಯಕಾರವೆ ಸಂಗ. ನಕಾರವೆ ಪರಿವ, ಮಕಾರವೆ ಪಾರುವ, ಶಿಕಾರವೆ ಸುಳಿವ, ವಕಾರವೆ ಹಬ್ಬುವ, ಯಕಾರವೆ ಅಗಲುವ [ಗುಣಂಗಳು] ನಕಾರವೆ ರಾಗ, ಮಕಾರವೆ ದ್ವೇಷ, ಶಿಕಾರವೆ ಭಯ, ವಕಾರವೆ ಲಜ್ಜೆ, ಯಕಾರವೆ ಮೋಹ. ಕ್ಲಂ ಕ್ಲೀಂ ಎಂಬುದ ಎಚ್ಚು, ಕಠಿಣ ಮೃದುವಿಗೆ ಇಟ್ಟ ನೋಡಾ. ಕ್ಲಂ ಕ್ಲೀಂ ಎಂಬುದ ಉಷ್ಣಚಲನೆಗೆ ಸೇರಿಸಿದ ನೋಡಾ. ನಮಃ ಶಿವಾಯ ಎಂಬುದ ಗಂಧ ರಸ ರೂಪು ಸ್ಪರ್ಶ ಶಬ್ದಕ್ಕೆ ಸಂಬಂಧಿಸಿದ ನೋಡಾ. ನಮಃ ಶಿವಾಯ ಎಂಬುದ ಪಾಯು ಗುಹ್ಯ ಪಾದ ಪಾಣಿ ವಾಕ್ಕಿಗೆ ಸಂಬಂಧಿಸಿದ ನೋಡಾ. ನಮಃ ಶಿವಾಯ ಎಂಬುದ ನಾಸಿಕ ಜಿಹ್ವೆ ನೇತ್ರ ತ್ವಕ್ಕು ಶ್ರೋತ್ರಕ್ಕೆ ಸಂಬಂಧಿಸಿದ ನೋಡಾ. ನಮಃ ಶಿವಾಯ ಎಂಬುದ ಪ್ರಾಣ ಅಪಾನ ವ್ಯಾನ ಉದಾನ ಸಮಾನಕ್ಕೆ ಸಂಬಂಧಿಸಿದ ನೋಡಾ. ನಮಃ ಶಿವಾಯ ಎಂಬುದ ಚಿತ್ತ ಬುದ್ಧಿ ಅಹಂಕಾರ ಮನ ಜ್ಞಾನಕ್ಕೆ ಸಂಬಂಧಿಸಿದ ನೋಡಾ. ಈ ರೀತಿಯಿಂದರಿದ ಶಿವತತ್ತ್ವ ತಾನಾಗಿ ನಿಂದ ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ.