Index   ವಚನ - 83    Search  
 
ಅಖಿಳಾಗಮ ಶ್ರುತಿ ಪುರಾಣಂಗಳು ವಿಭೂತಿಯನೊಲಿದು ಧರಿಸೆಂದು ಹೇಳುತ್ತಿವೆ ನೋಡಾ. ಇದನರಿದರಿದು ಧರಿಸದಿಹ ನರನೆ ಪತಿತನೆಂದು ಸಾರುತ್ತಿವೆ ವೇದಾಗಮಂಗಳು ನೋಡಾ. ಪಂಚಾಕ್ಷರಿಯ ಮಂತ್ರ ಸಹಿತ ವಿಭೂತಿಯನು, ಲಲಾಟಾದಿ ಸಮಸ್ತ ಸ್ಥಾನಂಗಳಲ್ಲಿ ಅಲಂಕರಿಸಲು, ಆತನ ಲಲಾಟದ ದುರ್ಲಿಖಿತವ ತೊಡೆದು, ನಿಜಸುಖವೀವುದೆಂದು ಹೇಳುತ್ತಿವೆ ಸಕಲ ಸಂಹಿತೆಗಳು. ಇಂತಪ್ಪ ವಿಭೂತಿಯ ಧಾರಣವನುಳಿದು, ಮೋಕ್ಷವನೆಯ್ದಿಹೆನೆಂಬುವನ ಬುದ್ಧಿ, ವಿಷಪಾನವ ಮಾಡಿ, ಶರೀರಕ್ಕೆ ನಿತ್ಯತ್ವವ ಪಡೆದೆಹೆನೆಂಬವನಂತೆ. ಇದು ಕಾರಣ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ ನಿಜವ ಬೆರಸುವಡೆ, ಶ್ರೀವಿಭೂತಿಯ ಧಾರಣವೇ ಮುಖ್ಯವಯ್ಯ.