Index   ವಚನ - 354    Search  
 
ಭಾವಿಸಿಹೆನೆಂಬ ಭಾವಕರಿಗೆ ಭಾವಭೇದವುಂಟು. ಆವಾವ ಪರಿಯಲ್ಲಿ ಭಾವಿಸಿದಡೇನು? ಶಿವಭಾವ ನೆಲೆಗೊಂಡುದೆ ಭಾವ. ಗುರುಬೋಧೆಯಿಂದ ಪರವನರಿದೆನೆಂಬವರಿಗೆ ಆತ್ಮಸ್ವರೂಪವನರಿದಲ್ಲದಾಗದು. ಆತ್ಮಸ್ವರೂಪವೆಂಬುದು ಅಖಂಡ ಬ್ರಹ್ಮ. ಸರ್ವಭೂತಾಂತಃಕರಣಾಶ್ರಿತ, ನಿಸ್ಸಂಗಕರ್ಮ ನಿಯಂತ್ರಿತ, ಸರ್ವವ್ಯಾಪಿ, ನಿತ್ಯನಿರಂಜನ ಸಂವಿತ್ಸ್ವರೂಪ, ಇಂತಪ್ಪ ಆತ್ಮನ ನೆಲೆಯನರಿದಾತನೇ ಮುಕ್ತನು. ಅರಿಯದಾತನೇ ಬದ್ಧನಯ್ಯಾ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ.