Index   ವಚನ - 409    Search  
 
ಅಜ ಹರಿಗಳರಿತಕ್ಕೆ ಅಗೋಚರವಾದ ನಿಜವನರಿದು ಸಹಜಾತ್ಮನಾದ ಶರಣಂಗೆ, ಏಕವೆಂಬುದು ಅನೇಕವೆಂಬುದು ತೋರದೆ, ಸ್ಥೂಲವೆಂಬುದು ಸೂಕ್ಷ್ಮವೆಂಬುದು ತೋರದೆ, ಚರಾಚರವು ನಾಸ್ತಿಯಾಗಿ, ಸಮಸ್ತ ಭುವನಂಗಳು ಶೂನ್ಯವಾಗಿ ತೋರದೆ, ನಿಶೂನ್ಯವಾಗಿ ತೋರದೆ, ಜ್ಞಾನರೂಪಾಗಿ ತೋರದೆ, ಮತ್ತೊಂದು ರೂಪಾಗಿಯೂ ತೋರದೆ, ಭೂಮಿ ಜಲ ಅಗ್ನಿ ಮರುದಾಕಾಶ ಚಂದ್ರ ಸೂರ್ಯರೆಂಬವೇನೂ ತೋರದೆ, ಸರ್ವಸಾಕ್ಷಿಯಾದ ಸಮ್ಯಗ್‍ಜ್ಞಾನವೊಂದೇ ಪರಿಪೂರ್ಣವಾಗಿ ತನ್ನ ಸ್ವರೂಪಿನಿಂದ ತೋರುತ್ತಿಹುದು, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ ಶರಣಂಗೆ.