Index   ವಚನ - 411    Search  
 
ಅಂಗ ಲಿಂಗವೆಂಬ ಸಂದು ಸಂಶಯವಳಿದು ಲಿಂಗಾಂಗದೈಕ್ಯವನರಿದು ಕೂಡಿದ ಶಿವಯೋಗಿಗೆ ನಿಶ್ಚಿಂತತ್ವವೇ ಶಿವಧ್ಯಾನ; ಸಕಲ ಕ್ರೀಗಳು ಲಯವಾದ ಇರವೇ ಶಿವಪೂಜೆ; ಚರಾಚರವನು ವ್ಯಾಪಿಸಿ ನಿಂದ ನಿಶ್ಚಲವೇ ಪ್ರದಕ್ಷಿಣ; ಸೋಹಂ ದಾಸೋಹಂ ಭಾವವಳಿದು ಆ ಶಿವೋಹಂ ಭಾವ ತನ್ನಲ್ಲಿ ನಿಂದುದೇ ನಮಸ್ಕಾರ; ಸ್ವಯ ಪರವೆಂಬ ವಿವೇಕದನುಭಾವವಡಗಿ ನಿಂದ ಮೌನವೇ ಸ್ತೋತ್ರ; ಬಿಂದುನಾದಾದಿ ಉಪಾಧಿಯ ತೊಲಗಿದ ಪರಿಪೂರ್ಣ ಶಿವನಾಗಿ ತಾ ಶಿವನಾದೆನೆಂಬ ಚಿದಹಂಭಾವವಡಗಿ ವಿಧಿ ನಿಷೇಧಂಗಳನರಿಯದುದೇ ಮಹಾಶೀಲ; ಸರ್ವಜ್ಞತ್ವ ನಿತ್ಯತೃಪ್ತಿ ಅನಾದಿಪ್ರಬೋಧ, ಸ್ವತಂತ್ರ ನಿತ್ಯ ಶಕ್ತಿ ಎಂಬ ಷಡ್ಗುಣೈಶ್ವರ್ಯ ತನಗೂ ಶಿವಂಗೂ ಸಮವಾಗಿ ಶಿವನೊಳಗೆ ತಾನು, ತನ್ನೊಳಗೆ ಶಿವನು ಅಡಗಿ ಸಮರಸವಾದುದೇ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನಲ್ಲಿ ಪರಮನಿರ್ವಾಣವೆನಿಸುವುದು.