Index   ವಚನ - 23    Search  
 
ಅಯ್ಯಾಎನ್ನ ಗುರು ಎನಗೆ ಉಪದೇಶವ ಮಾಡಿದ ಭೇದವ ಎಲ್ಲ ಗಣಂಗಳು ಕೇಳಿ. ಮಲತ್ರಯಂಗಳ ಹರಿದು, ಕರ್ಮೇಂದ್ರಿಯಂಗಳ ಜ್ಞಾನೇಂದ್ರಿಯ ಮಾಡಿ, ಕಾಯ ಜೀವ ಪ್ರಾಣ ಈ ತ್ರಿವಿಧವರತು ಭೇದವನರುಹಿಸಿದ. ಉರಸ್ಥಲದ ಪರಂಜ್ಯೋತಿಲಿಂಗವ ಎನ್ನ ಕರಸ್ಥಲಕ್ಕೆ ಕೊಟ್ಟರು. ಆ ಗುರು ಕೊಟ್ಟ ಲಿಂಗವೆಂಬ ದರ್ಪಣವ ನೋಡಿ, ಎನ್ನ ಮನೆವೆಂಬ ಸರ್ಪ ಆ ದರ್ಪಣದಲ್ಲಿ ಲೀಯವಾಯಿತ್ತು. ಇದು ಕಾರಣ, ಎನ್ನ ರೂಪೆಲ್ಲ ಉರಿಯುಂಡ ಕರ್ಪುರದಂತಾಯಿತ್ತು, ಆಲಿ ನುಂಗಿದ ನೋಟದಂತಾಯಿತ್ತು. ಪುಷ್ಪ ನುಂಗಿದ ಪರಿಮಳದಂತೆ ಬಯಲು ನುಂಗಿದ ಬ್ರಹ್ಮಾಂಡದಂತೆ, ಅಂಗಲಿಂಗ ಸಂಗಸಂಯೋಗವಾದ ಭೇದ. ಇದ ಹಿಂಗದೆ ಶರಣ ಸಂಗವ ಮಾಡಿದವರಂಘ್ರಿಯಲ್ಲಿ ಐಕ್ಯವಾದೆನಯ್ಯಾ, ಬಸವಪ್ರಿಯ ಕೂಡಲಚೆನ್ನಬಸವಣ್ಣಾ, ಇದನು ಕಂಗಳ ಪಟಲ ಹರಿದ ಲಿಂಗೈಕ್ಯರೇ ಬಲ್ಲರು.