ಅಯ್ಯಾ ಎನ್ನ ತಂದೆ ತಾಯಿಗಳು
ತಮ್ಮ ಕಂದನಪ್ಪ ಶಕ್ತಿಯ ಕೈಲೆಡೆಗೊಟ್ಟು ಕಳುಹಿದಡೆ,
ಎನ್ನ ಇಲ್ಲಿಗೆ ತಂದು ಮದುವೆಯಂ ಮಾಡಿ,
ಮುಗ್ಧನಪ್ಪ ಗಂಡನ ಕೊರಳಲ್ಲಿ ಕಟ್ಟಿ,
ಎನ್ನ ಅತ್ತೆ ಮಾವಂದಿರ ವಶಕ್ಕೆ ಕೊಟ್ಟರು.
ಎಮ್ಮತ್ತೆ ಮಾವಂದಿರ ಊರ ಹೊಕ್ಕರೆ,
ಕತ್ತಲೆಯಲ್ಲದೆ ಬೆಳಗಿಲ್ಲ.
ಎಮ್ಮತ್ತೆ ಮಾವಂದಿರ ಮನೆಯ ಹೊಕ್ಕರೆ,
ಅತ್ತಿಗೆ ನಾದಿನಿ ಭಾವ ಮೈದುನ ಇವರು ನಾಲ್ವರು
ಎನ್ನ ಗಂಡನ ತಲೆಯೆತ್ತಿ ನೋಡಲೀಸರು.
ಹಟ್ಟಿಯಲಿಪ್ಪ ಶುನಕ ಅಡಿಯಿಟ್ಟು ನಡೆಯಲೀಸವು.
ಸುತ್ತಲಿಹ ಆನೆ ಕುದುರೆ ತೊತ್ತಳದುಳಿವುತಿಪ್ಪವು.
ಒತ್ತೊತ್ತಿನ ಬಾಗಿಲವರು ಎನ್ನ ಇತ್ತಿತ್ತ ಹೊರಡಲೀಸರು.
ಸುತ್ತಲಿಹ ಕಾಲಾಳ ಪ್ರಹರಿ, ಮೊತ್ತದ ಸರವರ
ಈ ಮುತ್ತಿಗೆಗೊಳಗಾಗಿ ನಾ ಸತ್ತು ಹುಟ್ಟುತಿರ್ದೆನಯ್ಯಾ,
ಆಗ ಎನ್ನ ಹೆತ್ತತಾಯಿ ಬಂದು
ತತ್ವವೆಂಬ ತವರುಮನೆಯ ಹಾದಿ ತೋರಿದಡೆ,
ಇತ್ತ ತಾ ನೋಡಿ ಎಚ್ಚತ್ತು,
ಎನ್ನ ಚಿಕ್ಕಂದಿನ ಗಂಡನ ನೋಡಿದೆ.
ಎಮ್ಮಿಬ್ಬರ ನೋಟದಿಂದ ಒಂದು ಶಿಶು ಹುಟ್ಟಿತ್ತು.
ಆ ಶಿಶು ಹುಟ್ಟಿದಾಕ್ಷಣವೆ ಎಮ್ಮಿಬ್ಬರ ನುಂಗಿತ್ತು.
ನುಂಗಿದ ಶಿಶು ತಲೆಯೆತ್ತಿ ನೋಡಲು,
ಎಮ್ಮತ್ತೆ ಮಾವಂದಿರಿಬ್ಬರು ಹೆದರಿ ಬಿದ್ದರು.
ಅತ್ತಿಗೆ ನಾದಿನಿ ಭಾವ ಮೈದುನ ಇವರು ನಾಲ್ವರು
ಎತ್ತಲೋ ಓಡಿಹೋದರು.
ಈ ಹಟ್ಟಿಯಲ್ಲಿಪ್ಪ ಶುನಕ ಸುತ್ತಲಿಹ ಆನೆ ಕುದುರೆ
ಒತ್ತೊತ್ತಿನ ಬಾಗಿಲವರು,
ಸುತ್ತಲಿಹ ಕಾಲಾಳ ಪ್ರಹರಿ ಮೊತ್ತದ
ಸರವರ ಹೊತ್ತಿ ನಿಂದುರಿದು,
ನಾ ಸುತ್ತಿ ನೋಡಿದರೆ ಎಲ್ಲಿಯೂ
ಬಟ್ಟಬಯಲಾಗಿರ್ದಿತ್ತು ಕಾಣಾ.
ಬಸವಪ್ರಿಯ ಕೂಡಲಚೆನ್ನಬಸವಣ್ಣ.
Art
Manuscript
Music
Courtesy:
Transliteration
Ayyā enna tande tāyigaḷu
tam'ma kandanappa śaktiya kaileḍegoṭṭu kaḷuhidaḍe,
enna illige tandu maduveyaṁ māḍi,
mugdhanappa gaṇḍana koraḷalli kaṭṭi,
enna atte māvandira vaśakke koṭṭaru.
Em'matte māvandira ūra hokkare,
kattaleyallade beḷagilla.
Em'matte māvandira maneya hokkare,
attige nādini bhāva maiduna ivaru nālvaru
enna gaṇḍana taleyetti nōḍalīsaru.
Haṭṭiyalippa śunaka aḍiyiṭṭu naḍeyalīsavu.
Suttaliha āne kudure tottaḷaduḷivutippavu.
Ottottina bāgilavaru enna ittitta horaḍalīsaru.
Suttaliha kālāḷa prahari, mottada saravara
ī muttigegoḷagāgi nā sattu huṭṭutirdenayyā,
āga enna hettatāyi bandu
tatvavemba tavarumaneya hādi tōridaḍe,
itta tā nōḍi eccattu,
enna cikkandina gaṇḍana nōḍide.
Em'mibbara nōṭadinda ondu śiśu huṭṭittu.
Ā śiśu huṭṭidākṣaṇave em'mibbara nuṅgittu.
Nuṅgida śiśu taleyetti nōḍalu,
em'matte māvandiribbaru hedari biddaru.
Attige nādini bhāva maiduna ivaru nālvaru
Ettalō ōḍ'̔ihōdaru.
Ī haṭṭiyallippa śunaka suttaliha āne kudure
ottottina bāgilavaru,
suttaliha kālāḷa prahari mottada
saravara hotti ninduridu,
nā sutti nōḍidare elliyū
baṭṭabayalāgirdittu kāṇā.
Basavapriya kūḍalacennabasavaṇṇa.