Index   ವಚನ - 28    Search  
 
ಅಯ್ಯಾ ನಾ ಉತ್ತರವನೇರಿ ನೋಡಲಾಗಿ, ಊರೊಳಗಣ ಉಲುಹೆಲ್ಲ ನಿಂದಿತ್ತು. ಪಶ್ಚಿಮಕ್ಕಿಳಿದು ನೋಡಲಾಗಿ, ಪ್ರಾಣ ಪವನನ ಸುಳುಹು ನಿಂದಿತ್ತು. ಪೂರ್ವವ ಮೆಟ್ಟಿ ನೋಡಲಾಗಿ, ಆರು ನೆಲೆ ಮೂರಾಗಿದ್ದವು. ಅಯ್ಯಾ ನಾ ದಕ್ಷಿಣಕ್ಕೆ ಬಂದು ನೋಡಲಾಗಿ ಈರೇಳು ಭವನವು ಕುಕ್ಷಿಯೊಳಗೆ ನಿಕ್ಷೇಪವಾಗಿದ್ದಿತು. ಅದು ಹೇಗೆಂದಡೆ: ಇಹಲೋಕವು ತನ್ನೊಳಗೆ, ಪರಲೋಕವು ತನ್ನೊಳಗೆ, ಸಚರಾಚರವೆಲ್ಲ ತನ್ನೊಳಗೆ, ಶಿವಶಕ್ತಿಯು ತನ್ನೊಳಗೆ, ಭುವನಾದಿ ಭುವನಂಗಳು ತನ್ನೊಳಗೆ. ಅದು ಹೇಗೆಂದಡೆ: ಅದಕ್ಕೆ ದೃಷ್ಟವ ಹೇಳಿಹೆನು, ಬಲ್ಲವರು ತಿಳಿದುನೋಡಿ, 'ಓಂ ಏಕಮೇವನದ್ವಿತೀಯ' ಎಂಬ ಶ್ರುತಿ ಕೇಳಿ ಬಲ್ಲಿರೆ. ಇಂತಪ್ಪ ಮನಕ್ಕೆ ಒಂದಲ್ಲದೆ ಎರಡುಂಟೆ? ತಾನಲ್ಲದೆ ಅನ್ಯೋನ್ಯವಿಲ್ಲಾಯೆಂದು ಅರಿದ ಮೇಲೆ ತನಗಿಂದ ಮುನ್ನ ಇವೇನಾದರು ಉಂಟೆ? ಇದು ಕಾರಣ, ನಮ್ಮ ದೇವನೊಬ್ಬನೆ. ಬಸವಪ್ರಿಯ ಕೂಡಲಚೆನ್ನಬಸವಣ್ಣಾ, ಆತಂಗೆ ನಮೋ ನಮೋ ಎಂಬೆ.