Index   ವಚನ - 35    Search  
 
ಅಯ್ಯಾ ಹಾಳೂರೊಳಗೊಂದು ಹಗವ ಕಂಡೆನಯ್ಯಾ. ಹಗದ ಮೇಲೊಂದು ಬಾವಿ ಹುಟ್ಟಿತ್ತು. ಹಗದ ಬಾವಿಯ ನಡುವೆ ವಡಬಾಗ್ನಿಯೆಂಬ ಕಿಚ್ಚು ಹುಟ್ಟಿತ್ತು. ಆ ಹಗದ ಧಾನ್ಯವ ತೆಗೆತೆಗೆದು, ಬಾವಿಯ ನೀರ ಮೊಗೆಮೊಗೆದು, ವಡಬಾಗ್ನಿಯೆಂಬ ಕಿಚ್ಚಿನೊಳಗೆ ಅಡಿಗೆಯ ಮಾಡಿಕೊಂಡು, ಉಂಡು ಉಟ್ಟಾಡಬಂದರು, ಹಲಬರು ಕೆಲಬರು. ಉಂಡುಟ್ಟಾಡಿ ಗಂಡು ಗೆಲವುದ ಕಂಡು ತಾಳಲಾರದೆ, ಕುಂಡಲಿ ಅಗ್ನಿಯ ಎಬ್ಬಿಸಿ ಉರುಹಿದಡೆ, ಇವರೆಲ್ಲರೂ ದಹನವಾದರು. ಆ ಹಗವು ಬೆಂದಿತ್ತು, ಬಾವಿಯು ಬತ್ತಿತ್ತು, ವಡಬಾಗ್ನಿಯೆಂಬ ಕಿಚ್ಚು ಕೆಟ್ಟಿತ್ತು. ಇದಕಂಡು ನಾ ನಿಮ್ಮೊಳಚ್ಚೊತ್ತಿದಂತಿರ್ದೆನಯ್ಯಾ, ಬಸವಪ್ರಿಯ ಕೂಡಲಚೆನ್ನಬಸವಣ್ಣಾ.