ಅರಿವೆಂಬುದೆ ಆಚಾರ, ಆಚಾರವೆಂಬುದೆ ಅರಿವು.
ಅರಿವು ಆಚಾರದ ಸಂಗಷ್ಟದ ಕೂಟದ ಸ್ಥಲದಲ್ಲಿ ವಿಭೇದವೇ ಕ್ರೀ.
ಆ ಕ್ರೀಯೆ ವರ್ಮ, ಧರ್ಮ,
ಅದೇ ಮುಕ್ತಿಗೆ ಸಾಧನ.
ಆ ಭಕ್ತಿಯೇ ಮುಕ್ತಿಸಾಧನ,
ಆ ಮುಕ್ತಿಯೆ ಗುರುಪದಸಾಧನ.
ಗುರುಪದವೆ ಲಿಂಗಸಾಧನ,
ಆ ಲಿಂಗಸಾಧನವೆ ಜಂಗಮಸಾಧ್ಯ.
ಆ ಜಂಗಮಸಾಧ್ಯವೆ ಪ್ರಸಾದಸಾಧ್ಯ.
ಆ ಪ್ರಸಾದಸಾಧ್ಯವೆ ಪರಸಾಧ್ಯ,
ಆ ಪರಸಾಧ್ಯವಾದ ಬಳಿಕ,
ಕ್ರಿಯಾ ಕರ್ಮ ಧರ್ಮ ಭಕ್ತಿ ಯುಕ್ತಿ ಮುಕ್ತಿ,
ಗುರು ಲಿಂಗ ಜಂಗಮ ಪ್ರಸಾದ ಗಣತ್ವವೆಲ್ಲವು ಉಂಟು.
ಇಂತೀ ಸರ್ವಾಂಗವೇದ್ಯವಾದ ಮಹಾಮಹಿಮನ
ಹಿಡಿದನೆನ್ನಬಾರದು, ಬಿಟ್ಟನೆನ್ನಬಾರದು,
ಮುಟ್ಟಿದನೆನ್ನಬಾರದು, ತಟ್ಟಿದನೆನ್ನಬಾರದು.
ಸರ್ವಭೋಗ ಮುಕ್ತಿ ಸುಖದುಃಖಗಳೊಳಗೆ
ಉಂಟೆನಬಾರದು, ಇಲ್ಲೆನಬಾರದು.
ಅದೆಂತೆಂದಡೆ: ಸರ್ವವೂ
ಶಿವನಿಂದಲಾದವೆಂಬುದ ಕೇಳಿ ಬಲ್ಲಿರಿ.
ತನ್ನಿಂದಾದವರೊಳಗೆ ತಾನುಂಟಾಗಿ,
ಇಲ್ಲವಾಗಿರ್ಪ ಭೇದವ ತಾನೆ ಬಲ್ಲ.
ಇದು ಕಾರಣ, ಶಿವನಾದ ಶರಣನ ಅಂತಿಂತೆಂದಡೆ,
ನಮ್ಮ ಬಸವಪ್ರಿಯ ಕೂಡಲಸಂಗಮದೇವ ಸಾಕ್ಷಿಯಾಗಿ
ನಾಯಕ ನರಕದಲ್ಲಿಕ್ಕುವ.