Index   ವಚನ - 38    Search  
 
ಅವರನಕ ಕೂಳ ಇಡಿದ ಒಡಲಿಗೆ, ಅರೆದು ಕುದಿದು, ಕೋಟಲೆಗೊಂಬುತಿದ್ದರು. ಈ ಹದನನರಿಯದೆ ಕೆಡುತ್ತಿದ್ದೆಯಲ್ಲಾ ಎಂದು ತುದಿ ಹಿಡಿದು, ತೆಗೆದುಕೊಂಡಾತ ಚೆನ್ನಮಲ್ಲೇಶ್ವರನಯ್ಯ. ಆ ಒಡಲಗುಣದ ಕೆಡಿಸುವುದಕ್ಕೆ ಪ್ರಸಾದವೆಂಬ ಮದ್ದನಿಕ್ಕಿ. ಸಲಹಿದಾತ ಚೆನ್ನಮಲ್ಲೇಶ್ವರನಯ್ಯ. ಅಂಗಕ್ಕೆ ಆಚಾರ, ಮನಸ್ಸಿಗೆ ಅರುಹು, ಕಂಗಳಿಗೆ ಲಿಂಗವ ತೋರಿದಾತ ಚೆನ್ನಮಲ್ಲೇಶ್ವರನಯ್ಯ. ಇಂತು ಎನ್ನ ಭವವ ಕೊಂದಿಹೆನೆಂದು ಗುರುಲಿಂಗಜಂಗಮ ಈ ತ್ರಿವಿಧವಾಗಿಯು ಸುಳಿದಾತ ಚೆನ್ನಮಲ್ಲೇಶ್ವರನಯ್ಯ. ಇಂತಪ್ಪ ಚೆನ್ನಮಲ್ಲೇಶ್ವರನ ಶ್ರೀಪಾದವಿಡಿದು ಕೆಟ್ಟು ಬಟ್ಟಬಯಲಾದೆನಯ್ಯ. ಬಸವಪ್ರಿಯ ಚೆನ್ನಮಲ್ಲೇಶ್ವರನ ಪಾದವ ಮುಟ್ಟಿ, ಹುಟ್ಟುಗೆಟ್ಟುಹೋದೆನಯ್ಯ.