Index   ವಚನ - 58    Search  
 
ಆಧಾರ, ಸ್ವಾಧಿಷ್ಠಾನ, ಮಣಿಪೂರಕ, ಅನಾಹತ, ವಿಶುದ್ಧಿ, ಆಜ್ಞಾಚಕ್ರವೆಂಬ ಷಡಾಧಾರಚಕ್ರವನರಿದು, ಏರಿ ಏರಿ ಇಳಿದು ಆದಿಯ ನೋಡಿಕೊಂಡು, ಆದಿ ಅನಾದಿ ಎಂಬ ಭೇದವ ನೋಡಿ, ಶೋಧಿಸಿ, ಸಪ್ತಧಾತುವಿನ ನೆಲೆಯ ಕಂಡು, ಮನ ಬುದ್ಧಿ ಚಿತ್ತವ ಏಕಹುರಿಯ ಮಾಡಿ, ಉತ್ಪತ್ತಿ ಸ್ಥಿತಿ ಲಯವೆಂಬ ಕಾಲಮೂಲಾದಿಗಳ ಸುಟ್ಟು, ಧ್ಯಾನದಲ್ಲಿ ನಿಂದು, ಅಂಗ ಲಿಂಗ ಹಸ್ತ ಮುಖ ಅರ್ಪಿತ ಅವಧಾನವೆಂಬ ಷಟ್‍ಸ್ಥಲವ ಮೆಟ್ಟಿನಿಂದು, ಆರರಿಂದ ವಿೂರಿ ತೋರುವ ಬೆಳಗ ಕಂಡು, ನಾನು ಒಳಹೊಕ್ಕು ನೋಡಲಾಗಿ, ಒಳಹೊರಗೆ ತೊಳತೊಳಗಿ ಬೆಳಗುತ್ತ ಇಳೆ ಬ್ರಹ್ಮಾಂಡ ತಾನೆಯಾಗಿರ್ದ ನಮ್ಮ ಬಸವಪ್ರಿಯ ಕೂಡಲಚೆನ್ನಬಸವಣ್ಣ.