Index   ವಚನ - 76    Search  
 
ಉರಿಯೊಳಗೆ ಉರಿ ಹುಟ್ಟಿ, ಶರಧಿಯಾಪೋಷಣವಾಯಿತ್ತು. ಧರೆ ನಿಬ್ಬೆರಗಾಯಿತ್ತು, ಶರಧಿ ಬತ್ತಿತ್ತು, ಉರಿ ನಿಂದಿತ್ತು. ವಾಯು ನಾಶವಾಯಿತ್ತು, ಆಕಾಶ ಬಯಲಾಯಿತ್ತು. ಇದು ಕಾರಣ, ಆತ್ಮ ಕರ್ಪುರದ ಗಿರಿಯಂತೆ ನಿಂದಿತ್ತು. ಆತ್ಮ ಪರಂಜ್ಯೋತಿಯಂತೆ ಪ್ರಜ್ವಲಿಸಿತ್ತು. ಇದರ ಭೇದವನರಿದು ಮೂರು ಮುಟ್ಟದೆ, ಆರು ತಟ್ಟದೆ, ಬೇರೆ ಒಂದರ ಮೇಲೆ ನಿಂದು, ಸಂದಿಗೊಂದಿಯನೆಲ್ಲವ ಶೋಧಿಸಿ, ಬೆಂದ ನುಲಿಯ ಹಾಗೆ ಅಂದವಾಗಿಪ್ಪುದನೊಂದು ನೋಡುವರೆ ಸೇವೆಗೆ ಬಾರದು. ಇದರಂದವ ಲಿಂಗೈಕ್ಯರೆ ಬಲ್ಲರಲ್ಲದೆ, ಸಂದೇಹ ಭ್ರಮೆಯೊಳುಸಿಕ್ಕಿ ನೊಂದು ಬೆಂದು ಸಾವ ಹಂದಿಗಳೆತ್ತ ಬಲ್ಲರು, ಬಸವಪ್ರಿಯ ಕೂಡಲಚೆನ್ನಬಸವಣ್ಣಾ?