Index   ವಚನ - 107    Search  
 
ಗುರುಪ್ರಸಾದ, ಲಿಂಗಪ್ರಸಾದ, ಜಂಗಮಪ್ರಸಾದ, ಅಚ್ಚಪ್ರಸಾದ, ಅರ್ಪಿತಪ್ರಸಾದ, ಸಹಭೋಜನ, ಆರರಲ್ಲಿ ಅರ್ಪಿತ, ಮೂರರಲ್ಲಿ ಮುಕ್ತವೆಂದು ಊರೆಲ್ಲರ ಮುಂದೆ ದೂರಿಯಾಡುವ ನಾಯಿಮನುಜರಿರಾ, ಹೀಗೇಕೆ ದೂರುವಿರಿ? ಗುರುವೆಷ್ಟು, ಲಿಂಗವೆಷ್ಟು, ಜಂಗಮವೆಷ್ಟು, ಪ್ರಸಾದವೆಷ್ಟು, ಅರ್ಪಿತವೆಷ್ಟು? ಇದರ ಅವಧಾನವನರಿದ ಶರಣಂಗೆ, ಒಂದಲ್ಲದೆ ಎರಡುಂಟೆ? ಅವು ಒಂದೆಂಬುವನಕ ಬಂಧನವು. ತತ್ವಾರ್ಥಕ್ಕೆ ಇದಿರಿಟ್ಟುಕೊಂಡಿಪ್ಪನಲ್ಲದೆ, ಅರಿದ ಶರಣಂಗೆ ಒಂದೆಂಬುದು ಸಂದೇಹ. ಈ ರೀತಿಯನರಿಯದೆ ತೂತುಬಾಯೊಳಗೆ ಮಾತಿಗೆ ತಂದು ನುಡಿದಾಡುವ ಪಾತಕರ ಮೆಚ್ಚುವನೆ, ನಮ್ಮ ಶರಣ ಬಸವಪ್ರಿಯ ಕೂಡಲಚೆನ್ನಬಸವಣ್ಣ?