Index   ವಚನ - 116    Search  
 
ಜಂಗಮ ಜಂಗಮವೆಂದು ನುಡಿದು, ಜಗದ ಹಂಗಿಗರಾಗಿ ಇರಲಾಗದು. ಜಗದ ಕರ್ತನ ಕೈಯಲ್ಲಿ ಹಿಡಿದುಕೊಂಡು ಜಂಗುಳಿಗಳ ಬಾಗಿಲ ಕಾಯಲಾಗದು. ಜಂಗಮದ ಸುಳುಹು ಎಂತಿರಬೇಕೆಂದರೆ, ತನ್ನ ನಂಬಿದ ಸಜ್ಜನರ ಸದ್ಭಕ್ತರಲ್ಲಿಗೆ ಲಿಂಗವಾಗಿ ಗಮಿಸಿ, ತಾ ಕಂಡ ಲಿಂಗಾಂಗವನು ಅಲ್ಲಿಯೇ ನಿಕ್ಷೇಪಿಸಿ, ತಾ ನಿರ್ಗಮನಿಯಾಗಿ ಸುಳಿಯಬಲ್ಲರೆ, ಜಂಗಮಲಿಂಗವದು ಇಂತಲ್ಲದೆ ಕಂಡವರ ಕಾಡಿ ಬೇಡಿಕೊಟ್ಟರೆ ಕೊಂಡಾಡಿ, ಕೊಡದಿದ್ದಡೆ ಜರಿದು, ತಾಗು ನಿರೋಧಕ್ಕೆ ಗುರಿಯಾಗಿ ನೋವುತ್ತ, ಬೇವುತ್ತ ಧಾವತಿಗೊಂಬ ಗಾವಿಲರ ಎಂತು ಜಂಗಮವೆಂಬೆ, ಬಸವಪ್ರಿಯ ಕೂಡಲಚೆನ್ನಬಸವಣ್ಣಾ?