Index   ವಚನ - 117    Search  
 
ಜಂಗಮಲಿಂಗ ಎಂತಿಹನು ಎಂದರೆ, ಅಂತರಂಗದಲ್ಲಿ ಅರಿವು, ಬಹಿರಂಗದಲ್ಲಿ ಶಮೆ, ದಮೆ, ಸರ್ವಶಾಂತಿ ಎಡೆಗೊಂಡು, ತನ್ನ ನಂಬಿದ ಸಜ್ಜನಸದ್ಭಕ್ತರಿಗೆ, ಭಾವಕ್ಕೆ ಜಂಗಮವಾಗಿ, ಪ್ರಾಣಕ್ಕೆ ಲಿಂಗವಾಗಿ, ಕಾಯಕ್ಕೆ ಗುರುವಾಗಿ, ಪ್ರಾಣಕ್ಕೆ ಬಂದ ಪದಾರ್ಥವ ಲಿಂಗಾರ್ಪಿತವ ಮಾಡುತ್ತ, ಬಾರದ ಪದಾರ್ಥವ ಮನದಲ್ಲಿ ನೆನೆಯದೆ, ಮಾನವರ ಬೇಡದೆ, ಬಡಭಕ್ತರ ಕಾಡದೆ, ಒಡನೆ ಇಹ ಘನವನರಿದು, ದೃಢಭಕ್ತರೊಳು ಲಿಂಗವಾಗಿ, ಏನು ನುಡಿದರೂ ನಿಕ್ಷೇಪಿಸಿ, ನಿರ್ಗಮನಿಯಾಗಿ ಸುಳಿಯಬಲ್ಲರೆ, ಆತ ಲಿಂಗ ಜಂಗಮ. ಅದಕ್ಕೆ ನಮೋ ನಮೋ ಎಂದು ಭವಂ ನಾಸ್ತಿಯಾಯಿತ್ತು ಕಾಣಾ, ಬಸವಪ್ರಿಯ ಕೂಡಲಚೆನ್ನಬಸವಣ್ಣಾ.