Index   ವಚನ - 119    Search  
 
ಜಗದಗಲ ಮುಗಿಲಗಲ ಪಾದ ಪಾತಾಳದಿಂದತ್ತತ್ತ ಪಾದ. ಬ್ರಹ್ಮಾಂಡದಿಂದತ್ತತ್ತ ಮಕುಟ ವಿಶ್ವ ಬ್ರಹ್ಮಾಂಡವನು, ತನ್ನ ಕುಕ್ಷಿಯೊಳು ನಿಕ್ಷೇಪವ ಮಾಡಿಕೊಂಡಿಪ್ಪ ದೇವನೀಗ ಎನ್ನದೇವ. ಆ ದೇವನೊಳಗೆ ನಾನಡಕ, ನನ್ನೊಳಗೆ ಆ ದೇವನಡಕ. ಇಂತಪ್ಪ ದೇವನ ನಂಬಿ, ನಾ ಕೆಟ್ಟು ಬಟ್ಟಬಯಲಾದೆ. ಈ ದೇವನರಿಯದೆ ಜಗವೆಲ್ಲ ಕಲ್ಲದೇವರು, ಮಣ್ಣದೇವರು, ಮರದೇವರು ಎಂದು ಇವನಾರಾಧಿಸಿ, ಕೆಟ್ಟರಲ್ಲಿ. ಸ್ವರ್ಗ ಮರ್ತ್ಯ ಪಾತಾಳದವರೆಲ್ಲರು ಎನ್ನ ದೇವನನರದು ಅರ್ಚಿಸಲಿಲ್ಲ, ಪೂಜಿಸಲಿಲ್ಲ, ಭಾವಿಸಲಿಲ್ಲ. ಇದು ಕಾರಣ, ಆವ ಲೋಕದವರಾದರೂ ಆಗಲಿ, ಎನ್ನ ದೇವನನರಿದರೆ, ಭವವಿಲ್ಲ ಬಂಧನವಿಲ್ಲ. ನೆರೆ ನಂಬಿರೆ, ನಮ್ಮ ಬಸವಪ್ರಿಯ ಕೂಡಲಚೆನ್ನಬಸವಣ್ಣನ.