Index   ವಚನ - 151    Search  
 
ಪಿಂಡವಾದುದ ಪಿಂಡಜ್ಞಾನ ಹುಟ್ಟಿ ಅರಿದನಯ್ಯಾ ಶರಣನು. ಅದೆಂತೆಂದಡೆ: ಆತ್ಮರುಗಳಲ್ಲಿ ಪರಮಾತ್ಮನ ಕಳೆ ವೇದ್ಯವಾಗಿರೆ, ತನುವ ರುಧಿರವ ಕೂಡಿಕೊಂಡು ಅಷ್ಟತನುಮೂರ್ತಿಯೆನಿಸಿಕೊಂಡು, ಸಪ್ತಧಾತು ಬೆರೆಸಿಕೊಂಡು, ಷಡುವರ್ಣವ ಕೂಡಿಕೊಂಡು, ಪಂಚತತ್ವವ ಪ್ರವೇಶಿಸಿಕೊಂಡು, ಚತುಷ್ಟಯ ಕರಣವ ದಳಕುಳವ ಮಾಡಿಕೊಂಡು, ಸ್ಥೂಲಸೂಕ್ಷ್ಮಕಾರಣವ ಅಂಗವ ಮಾಡಿಕೊಂಡು, ಕಾಯ ಜೀವವೆರಡು ದಳಕುಳವ ಮೆಟ್ಟಿಕೊಂಡು, ಏಕದಳದ ಮೇಲೆ ಪರಮಾತ್ಮ ತಾ ನಿಂದು, ಸಾಕ್ಷಿಕನಾಗಿ ಸಾವು ಹುಟ್ಟನರಿವುತ್ತ, ಜ್ಞಾನವಿದು ಅಜ್ಞಾನವಿದು ಎಂದು ಕಾಣುತ್ತ, ಸಂಸಾರ ಹೇಯವ ಮಾಡುತ್ತ, ಲಿಂಗವ ಹಾಡುತ್ತ, ಲಿಂಗವ ಹಾಡುತ್ತ, ಜಂಗಮವ ಹರಸುತ್ತ, ಲಿಂಗವಾಗಿ ಬಂದು ಗುರುಪಾದವಿಡಿದಾತನೀಗ ತತ್‍ಶಿಷ್ಯ. ಆ ಶಿಷ್ಯಂಗೆ ಶ್ರೀ ಗುರುಸ್ವಾಮಿ, ಕಾಯವಿದು ಕರಣವಿದು ಜೀವವಿದು ವಾಯುವಿದು, ಮನವಿದು ಪ್ರಾಣವಿದು ಮಾಯವಿದು ಮದವಿದು ಮಲವಿದೆಂದು ಆತನಾದಿಯನುರುಹಿ, ತನ್ನಾದಿಯ ಕುರುಹಿದೇಕೋ ಮಗನೇ ಎಂದು, ಗಣಸಾಕ್ಷಿಯಾಗಿ ಹಸ್ತಮಸ್ತಕಸಂಯೋಗ ಮಾಡಿ, ಕರ್ಣದಲಿ ಮಂತ್ರವ ಹೇಳಿ, ಕರಸ್ಥಲಕ್ಕೆ ಲಿಂಗವ ಕೊಡುವಲ್ಲಿ, ಮಗನೆ ಹಸ್ತವೆಂದರೆ ಮಂತ್ರಲಿಂಗವಾಗಿ ಇದೇನೆ, ಮಸ್ತಕವೆಂದರೆ ಚಿದ್ಬ್ರಹ್ಮದಲ್ಲಿ ತೋರುವ ಸುನಾದಕಳೆ ನಾನೇಯಾಗಿ ಇದೇನೆ. ಸಂಯೋಗವೆಂದರೆ ಸರ್ವಾಂಗದಲ್ಲಿ ಪ್ರಾಣಜಂಗಮನಾಗಿ ನಾನೇ ಇದೇನೆ. ತ್ರಿವಿಧ ಉಪದೇಶವೆ ತ್ರಿವಿಧ ಪ್ರಣವವಾಗಿ ಅದಾವೆ. ತ್ರಿವಿಧ ಪ್ರಣವವೆ ಗುರುಲಿಂಗಜಂಗಮವೆಂದು, ಆ ಗುರುಲಿಂಗಜಂಗಮವೆ ಇಷ್ಟ ಪ್ರಾಣ ತೃಪ್ತಿಯೆಂದು, ಆ ಇಷ್ಟ ಪ್ರಾಣ ತೃಪ್ತಿಯೆ ಆಚಾರಾದಿ ಮಹಾಲಿಂಗವೆಂದು, ಆ ಆಚಾರಾದಿ ಮಹಾಲಿಂಗವೆ ಮೂವತ್ತಾರು ಲಿಂಗವೆಂದು, ಆ ಮೂವತ್ತಾರು ಲಿಂಗವೆ ಇನ್ನೂರ ಹದಿನಾರು ಲಿಂಗವೆಂದರಿದು, ಇಂತಿವೆಲ್ಲಕ್ಕೆ ಇಷ್ಟ ಗುರುವೆ ಆದಿ, ಇಷ್ಟೆ ಲಿಂಗವೆ ಮಧ್ಯ, ಇಷ್ಟಜಂಗಮವೆ ಅವಸಾನ. ಇದು ಕಾರಣ, ಗುರುವಿಗೆ ತನು, ಲಿಂಗಕ್ಕೆ ಮನ, ಜಂಗಮಕ್ಕೆ ಧನ. ಈ ತ್ರಿವಿಧವು ತ್ರಿವಿಧ ಮುಖದಲ್ಲಿ ಗುರುವಿಂದ ತನು ಶುದ್ಧಪ್ರಸಾದವಾಯಿತ್ತು. ಲಿಂಗದಿಂದ ಮನ ಸಿದ್ಧಪ್ರಸಾದವಾಯಿತ್ತು. ಜಂಗಮದಿಂದ ಪದಾರ್ಥ ಪ್ರಸಿದ್ಧಪ್ರಸಾದವಾಯಿತ್ತು. ಈ ತ್ರಿವಿಧ ಪ್ರಸಾದವೆ ಅಂಗವಾದ ಶರಣಂಗೆ ಅರಿವೇ ಗುರು, ಜ್ಞಾನವೆ ಲಿಂಗ, ಭಾವವೆ ಜಂಗಮ. ಇಂತಪ್ಪ ಶರಣ ಮತ್ತೆ ಗುರುವೆನ್ನ, ಲಿಂಗವೆನ್ನ, ಜಂಗಮವೆನ್ನ, ಆಚಾರವೆನ್ನ, ತಾನೆನ್ನ ನಾನೆನ್ನ, ಏನೂ ಎನ್ನ, ಬಸವಪ್ರಿಯ ಕೂಡಲಚೆನ್ನಸಂಗಮದೇವ ತಾನೆ ತನ್ಮಯವಾಗಿ.