Index   ವಚನ - 166    Search  
 
ಭಕ್ತನಾದರು ಆಗಲಿ, ಗುರುವಾದರು ಆಗಲಿ, ಲಿಂಗವಾದರು ಆಗಲಿ, ಜಂಗಮವಾದರು ಆಗಲಿ, ಈ ಮರ್ತ್ಯದಲ್ಲಿ ಒಡಲುವಿಡಿದು ಹುಟ್ಟಿದ ಮೇಲೆ, ಮಾಯೆಯ ಗೆದ್ದೆ[ಹೆ]ನೆಂದರೆ ಸಾಧ್ಯವಲ್ಲ ಕೇಳಿರಣ್ಣಾ ! ಗೆಲ್ಲಬಹುದು ಮತ್ತೊಂದು ಭೇದದಲ್ಲಿ. ಅದೆಂತೆಂದರೆ: ಭಕ್ತನಾದರೆ ತನುವ ಗುರುವಿಂಗಿತ್ತು, ಮನವ ಲಿಂಗಕ್ಕಿತ್ತು, ಧನವ ಜಂಗಮಕ್ಕಿತ್ತು ಬೆರೆದರೆ, ಮಾಯಾಪಾಶ ಹರಿಯಿತ್ತು. ಇದರ ಗೊತ್ತು ಹಿಡಿವನೆಂದರೆ ಆತನ ಭಕ್ತನೆಂಬೆ. ಗುರುವಾದರೆ ಸಕಲ ಆಗಮಂಗಳನರಿದು, ತತ್ವಮಸಿ ಎಂದು ನಿತ್ಯವ ನೆಮ್ಮಿ, ತನ್ನ ಒತ್ತುವಿಡಿದ ಶಿಷ್ಯಂಗೆ ಪರತತ್ವವ ತೋರಿ, ಪ್ರಾಣಲಿಂಗವ ಕರದಲ್ಲಿ ಕೊಟ್ಟು, ಆ ಲಿಂಗ ಅಂಗವೆಂಬ ಉಭಯದೊಳಗೆ ತಾನಡಗಿ, ತನ್ನೊಳಗೆ ಶಿಷ್ಯನಡಗಿ, ನಾನು ನೀನು ಎಂಬ ಉಭಯ ಎರಡಳಿದರೆ, ಆತನ ಗುರುವೆಂಬೆ. ಜಂಗಮವಾದರೆ ಬಾಯಿಲೆಕ್ಕಕ್ಕೆ ಬಾರದೆ, ಬಂದು ಆಶ್ರಿತವೆನಿಸಿಕೊಳ್ಳದೆ ಆಸೆಯಳಿದು ಲಿಂಗಜಂಗಮವಾಗಿ ನಿರ್ಗಮನಿಯಾಗಿ, ಭರ್ಗೋ ದೇವಸ್ಯ ಎಂಬ, ಏಕೋದೇವ ನ ದ್ವಿತೀಯವೆಂಬ ಶ್ರುತಿಗೆ ತಂದು ತಾ ಪರಮಾನಂದದಲ್ಲಿ ನಿಂದು, ಪರಿಪೂರ್ಣನೆನಿಸಿಕೊಂಡು, ಅಣುವಿಂಗಣು, ಮಹತ್ತಿಂಗೆ ಮಹತ್ತು, ಘನಕ್ಕೆ ಘನವೆಂಬ ವಾಕ್ಯಕ್ಕೆ ಸಂದು, ತಾ ನಿಂದು ಜಗವನೆಲ್ಲವ ಆಡಿಸುವ ಅಂತರಾತ್ಮಕನಾಗಿ ಅಡಗಿದರೆ ಜಂಗಮವೆಂಬೆ.ಅಂತಾದರೆ ಈ ತ್ರಿವಿಧವು ಏಕವಾದುದನರಿದು, ಈ ಲೋಕದ ಕಾಕುಬಳಕೆಗೆ ಸಿಲ್ಕದೆ, ಇಲ್ಲಿ ಹುಟ್ಟಿದವರೆಲ್ಲ ಇವರೊಳಗೆ ಆದರು. ನಾನು ತ್ರಿವಿಧದ ನೆಲೆಯ ಹಿಡಿದುಕೊಂಡು ಇವೆಲ್ಲಕ್ಕೂ, ಹೊರಗಾಗಿ ಹೋದನಯ್ಯಾ, ಬಸವಪ್ರಿಯ ಕೂಡಲಚೆನ್ನ ಬಸವಣ್ಣಾ.